ವಾರಾಂತ್ಯದ ರಜಾ- ಮನೆಯಲ್ಲಿಯೇ ಮಾಡಿ 'ಮಟನ್' ಮಜಾ!

ಇಂದು ಮಾಂಸಾಹಾರಿಗಳಿಗೆ ವಿಶೇಷವಾಗಿ ಮಸಾಲೆಯುಕ್ತ ಖಾದ್ಯವೊಂದನ್ನು ಪರಿಚಯಿಸುತ್ತಿದ್ದೇವೆ. ಸುಲಭವಾಗಿ ತಯಾರಿಸಬಹುದಾದ ಈ ಮಸಾಲೆಯುಕ್ತ ಮಟನ್ ಗ್ರೇವಿ ಕ್ಷಿಪ್ರವಾಗಿ ಬಡಿಸಬಹುದು.

ಸಾಮಾನ್ಯವಾಗಿ ಮಟನ್ ಬೇಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಬೇಗನೇ ತಯಾರಿಸಲು ಹೋದರೆ ರುಚಿ ಬರುವುದಿಲ್ಲ. ಆದರೆ ಇದಕ್ಕೆ ಅಪವಾದವೆಂಬಂತೆ ಈ ವಿಧಾನ ಸುಲಭ, ಕಡಿಮೆ ಸಮಯದಲ್ಲಿ ತಯಾರಿಸುವಂತಹದ್ದಾಗಿದ್ದು ರುಚಿಯೂ ಅಪ್ರತಿಮವಾಗಿದೆ. ಅಲ್ಲದೇ ಇದನ್ನು ತಯಾರಿಸಲು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಸಾಮಾಗ್ರಿಗಳೇ ಸಾಕು.

ಒಮ್ಮೆ ಇದು ತಯಾರಾಗಿ ಇದರ ಘಮ್ಮೆನ್ನುವ ಸುವಾಸನೆ ಗಾಳಿಯಲ್ಲಿ ಹರಡಿತೋ, ಮನೆಯ ಸದಸ್ಯರೆಲ್ಲರೂ ಕರೆಯದೇ ಊಟದ ಕೋಣೆಗೆ ಬಂದು ಮೊದಲೇ ಕುಳಿತುಕೊಳ್ಳುವ ಸಂಭವ ಹೆಚ್ಚು. ಇದನ್ನು ಅನ್ನ, ಚಪಾತಿ, ರೋಟಿ, ಪರೋಟ ಮೊದಲಾದವುಗಳ ಜೊತೆಗೆ ಸೇವಿಸಬಹುದು. ಬನ್ನಿ, ಈ ಖಾದ್ಯ ತಯಾರಿಸುವ ಬಗೆಯನ್ನು ಕಲಿಯೋಣ:    ಡಾಬಾ ಶೈಲಿಯಲ್ಲಿ ಮಟನ್ ಸಾರು   

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
 *ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು 
*ತಯಾರಿಕಾ ಸಮಯ: ನಲವತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು

 *ಕುರಿ ಮಾಂಸ - 1/2 ಕೇಜಿ (ಚಿಕ್ಕ ತುಂಡುಗಳಾಗಿಸಿದ್ದು) 
*ಬೆಣ್ಣೆ - 1/2 ಕಪ್ *ಗರಂ ಮಸಾಲಾ - 1 ಚಿಕ್ಕ ಚಮಚ 
*ಧನಿಯ ಪುಡಿ - 1 ಚಿಕ್ಕ ಚಮಚ 
*ಕೆಂಪು ಮೆಣಸಿನ ಪುಡಿ(ಬ್ಯಾಡಗಿ) - 1 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಎರಡು ಚಮಚ)
 *ಹಸಿಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1 ಚಿಕ್ಕ ಚಮಚ 
*ಹಸಿಮೆಣಸು - 5 ರಿಂದ 6 
*ಈರುಳ್ಳಿ (ಚಿಕ್ಕದಾಗಿ ಹೆಚ್ಚಿದ್ದು) - 1 ಕಪ್
*ಲಿಂಬೆ ರಸ - 1 ಚಿಕ್ಕ ಚಮಚ
 *ಎಣ್ಣೆ: ಅಗತ್ಯಕ್ಕೆ ತಕ್ಕಷ್ಟು 
*ಉಪ್ಪು: ರುಚಿಗನುಸಾರ   ನಾಟಿ ಶೈಲಿಯಲ್ಲಿ ಸ್ವಾದಿಷ್ಟ ಮಟನ್ ಕರಿ

ವಿಧಾನ:

 1) ಒಂದು ಪಾತ್ರೆಯಲ್ಲಿ ಗರಂ ಮಸಾಲಾ ಪುಡಿ, ಕೊತ್ತಂಬರಿಪುಡಿ ಅಥವ ಧನಿಯಾ ಪುಡಿ ಕೆಂಪು ಮೆಣಸಿನ ಪುಡಿ ಮತ್ತು ಹಸಿಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
 2) ಪ್ರೆಶರ್ ಕುಕ್ಕರ್ ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ ಒಳಭಾಗ ಒಣಗಿದ ಬಳಿಕ ಉರಿ ಚಿಕ್ಕದಾಗಿಸಿ ಇದರಲ್ಲಿ ಬೆಣ್ಣೆ ಹಾಕಿ. 
3) ಬೆಣ್ಣೆ ಕರಗಿ ಬಿಸಿಯಾದ ಬಳಿಕ ಈರುಳ್ಳಿ, ಹಸಿಮೆಣಸು ಹಾಕಿ ಸುಮಾರು ಕಂದು ಬಣ್ಣ ಬರುವಷ್ಟು ಹುರಿಯಿರಿ.
 4) ಇದಕ್ಕೆ ಮಾಂಸದ ತುಂಡುಗಳನ್ನು ಹಾಕಿ ಚೆನ್ನಾಗಿ ಬಾಡಿಸಿ. 
5) ಬಳಿಕ ಮಿಶ್ರಣ ಮಾಡಿರುವ ಮಸಾಲೆಪುಡಿಗಳನ್ನು ಸೇರಿಸಿ ಚೆನ್ನಾಗಿ ಕಲಕಿ.
 6) ಈ ಮಿಶ್ರಣದಿಂದ ಎಣ್ಣೆ ಒಸರಲು ಪ್ರಾರಂಭವಾದ ಬಳಿಕ ಉಪ್ಪು ಮತ್ತು ಕೊಂಚ ನೀರು ಸೇರಿಸಿ ಮಿಶ್ರಣ ಮಾಡಿ. ಅನ್ನಕ್ಕೆ ಬಳಸುವುದಾದರೆ ಕೊಂಚ ಹೆಚ್ಚಿನ ನೀರು, ರೊಟ್ಟಿ ಚಪಾತಿಗಳಿಗೆ ಕಡಿಮೆ ನೀರು ಮಿಶ್ರಣ ಮಾಡಿ. ಬಳಿಕ ಲಿಂಬೆರಸ ಸೇರಿಸಿ. 
7) ಈಗ ಕುಕ್ಕರ್‌ನ ಮುಚ್ಚಳ ಮುಚ್ಚಿ ಸುಮಾರು ಐದರಿಂದ ಆರು ಸೀಟಿ ಬರುವವರೆಗೆ ಕುದಿಸಿ.
8) ಬಳಿಕ ಉರಿ ಆರಿಸಿ ಹಾಗೇ ಕೊಂಚ ಹೊತ್ತು ತಣಿಯಲು ಬಿಡಿ. (ಒಂದು ವೇಳೆ ತಣಿಸುವಷ್ಟು ಸಮಯಾವಕಾಶ ಇಲ್ಲದಿದ್ದರೆ ಎಂಟು ಸೀಟಿಯವರೆಗೆ ಕುದಿಸಿ ಬಳಿಕ ತಣ್ಣೀರಿನ ಕೆಳಗೆ ಸೀಟಿ ಇರಿಸಿ ತಕ್ಷಣವೇ ತಣಿಸಿದ ಬಳಿಕ ಮುಚ್ಚಳ ತೆರೆಯಬಹುದು) 

9) ತಣಿದ ಬಳಿಕ ಪಾತ್ರೆಯಲ್ಲಿ ಸಾರನ್ನು ವರ್ಗಾಯಿಸಿ ಈಗಾಗಲೇ ಇದರ ಪರಿಮಳಕ್ಕೆ ತಲೆದೂಗಿ ಊಟದ ಮೇಜಿನ ಮೇಲೆ ಕುಳಿತಿರುವ ಮನೆಯವರಿಗೆ ಬಡಿಸಿ. ಈ ಸಾರು ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.









Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್