ಆಲೂ ಮಂಚೂರಿ: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

ಮಳೆಗಾಲ ಬಂತೆಂದರೆ ಸಾಕು, ನಮ್ಮ ನಾಲಿಗೆಯ ಚಪಲವು ಹೆಚ್ಚಾಗುತ್ತದೆ. ಜಿಟಿ ಜಿಟಿ ಎಂದು ಒಂದೇ ಸಮನೆ ಹೊರಗೆ ಮಳೆ ಬೀಳುತ್ತಿದ್ದರೆ, ಒಳಗೆ ಬೆಚ್ಚಗೆ ಕೂತು ಬಿಸಿ ಬಿಸಿಯಾದ, ನಾಲಿಗೆಗೆ ಚಟಪಟ ಎಂದು ರುಚಿಸುವ, ಯಾವುದಾದರು ಖಾರವಾದ ಕರಿದ ತಿನಿಸನ್ನು ತಿನ್ನಬೇಕೆಂದು ಮನಸ್ಸು ಬಯಸುವುದು ಸಹಜವೇ ಸರಿ. ಮಾರುಕಟ್ಟೆಗೆ ಹೋದರೆ, ಬೇಕಾದಷ್ಟು ಚಾಟ್ ಅಂಗಡಿಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ ಇಂತಹ ಖಾದ್ಯಗಳು ನಮ್ಮನ್ನು ಆಕರ್ಷಿಸದೇ ಬಿಡುವುದಿಲ್ಲ.
ಆದರೆ, ಮೇಲಿಂದ ಮೇಲೆ ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಅದರಲ್ಲೂ ಮಳೆಗಾಲದಲ್ಲಿ ನಮ್ಮ ಶರೀರವು ಅನೇಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ, ಮನೆಯಲ್ಲೇ ನಾವು ಇಷ್ಟಪಡುವ ಖಾದ್ಯಗಳನ್ನು ಮಾಡಿ ತಿಂದರೆ, ರುಚಿಶುಚಿಯಾಗಿಯೂ ಇರುತ್ತದೆ ಮತ್ತು ಆರೋಗ್ಯಕರವಾಗಿಯೂ ಇರುತ್ತದೆ.
ಸಾಮಾನ್ಯವಾಗಿ ಮನೆಯಲ್ಲಿರುವ ಸಾಮಗ್ರಿಗಳನ್ನೇ ಉಪಯೋಗಿಸಿ ತಯಾರು ಮಾಡುವ ಒಂದು ಸುಲಭವಾದ ರೆಸಿಪಿ ಇಲ್ಲಿದೆ ನೋಡಿ. ಅದುವೇ "ಆಲೂ ಮಂಚೂರಿ". ಹೌದು ಈ ತಿನಿಸಿನ ಹೆಸರು ಕೇಳಿದರೇ ಸಾಕು, ಬಾಯಲ್ಲಿ ನೀರೂರುವುದು ಖಂಡಿತ. ಇನ್ನು ಮಕ್ಕಳಂತೂ ಮಂಚೂರಿ ಎಂದರೆ ಸಾಕು, ಸಂಭ್ರಮಪಟ್ಟು ತಿನ್ನುತ್ತಾರೆ. ಅತಿಥಿಗಳು ಬಂದಾಗ ಕೂಡ ಈ ಖಾದ್ಯವನ್ನು ಮಾಡಿಕೊಟ್ಟು ಅವರನ್ನು ತೃಪ್ತಿ ಪಡಿಸಬಹುದು. ಹಾಗಿದ್ದರೆ ಬನ್ನಿ..ಇದಕ್ಕೆ ಬೇಕಾಗುವ ಸಾಮಗ್ರಿಗಳು ಏನೇನು, ಮಾಡುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.

ಆಲೂ ಮಂಚೂರಿ

*ಸಿದ್ಧತಾ ಸಮಯ : 10 ನಿಮಿಷ

*ತಯಾರಿಸಲು ಬೇಕಾಗುವ ಅವಧಿ : 10 - 15 ನಿಮಿಷ         ಆಹಾ..! ಬಿಸಿ ಬಿಸಿ ಆಲೂ-ಬ್ರೆಡ್ ರೋಲ್‌ ರೆಸಿಪಿ

ತಯಾರಿಸಲು ಬೇಕಾಗುವ ಸಾಮಗ್ರಿಗಳು:

*ಆಲೂ ಗೆಡ್ಡೆ : 2

*ಕಾರ್ನ್ ಫ್ಲೋರ್: 1 ಕಪ್

*ಅಚ್ಚ ಖಾರದ ಪುಡಿ : 1 ಚಮಚ

*ಉಪ್ಪು : ರುಚಿಗೆ ತಕ್ಕಷ್ಟು

*ಎಣ್ಣೆ : ಕರಿಯುವುದಕ್ಕೆ

*ಈರುಳ್ಳಿ : 1 ದೊಡ್ಡದು, ಸಣ್ಣಗೆ ಹೆಚ್ಚಿದ್ದು

*ಶುಂಠಿ ಬೆಳ್ಳುಳ್ಳಿ ಪೇಸ್ಟ್: ಸ್ವಲ್ಪ

*ಶುಂಠಿ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು: ಸ್ವಲ್ಪ

*ದಪ್ಪ ಮೆಣಸಿನಕಾಯಿ: 1, ಸಣ್ಣಗೆ ಹೆಚ್ಚಿದ್ದು

*ಚಿಲ್ಲಿ ಸಾಸ್ : 1 ಚಮಚ

*ಟೊಮೇಟೋ ಸಾಸ್ : 3 ಚಮಚ

*ಕೊತ್ತಂಬರಿ ಸೊಪ್ಪು : ಸಣ್ಣಗೆ ಹೆಚ್ಚಿದ್ದು ಸ್ವಲ್ಪ.            ಆಲೂ ಎಗ್ ಫ್ರೈ-ಬ್ಯಾಚುಲರ್ ರೆಸಿಪಿ

ಮಾಡುವ ವಿಧಾನ:


*ಮೊದಲಿಗೆ, ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಒಂದು ಬೌಲ್ನಲ್ಲಿ, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಹಾಕಿ ಕಲಿಸಿಟ್ಟುಕೊಳ್ಳಬೇಕು. ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಂಡ ಆಲೂಗೆಡ್ಡೆಯನ್ನು ಅದರಲ್ಲಿ ಅದ್ದಿ ಕರದಿಟ್ಟುಕೊಳ್ಳಬೇಕು.

*ನಂತರ ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು, ಅದಕ್ಕೆ ಎರಡು ಟೇಬಲ್ ಚಮಚ ಎಣ್ಣೆ ಹಾಕಿ ಅದು ಕಾದ ನಂತರ, ಮೊದಲಿಗೇ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ತಾಳಿಸಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಕೈ ಆಡಿಸಿ, ದಪ್ಪ ಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು ಹಾಗು ಶುಂಠಿ ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿದ್ದು ಹಾಕಬೇಕು.

*ಇನ್ನು ಇದೆಲ್ಲಾವನ್ನು ಚೆನ್ನಾಗಿ ತಾಳಿಸಿದ ನಂತರ ಕಾರ್ನ್ ಫ್ಲೋರ್ ನಲ್ಲಿ ಮೊದಲೇ ಕರಿದಿಟ್ಟುಕೊಂಡ ಆಲೂ ಹೋಳುಗಳನ್ನು ಹಾಕಬೇಕು. ಅದಕ್ಕೆ ಚಿಲ್ಲಿ ಸಾಸ್ ಒಂದು ಚಮಚ ಹಾಗು ಟೊಮೇಟೋ ಸಾಸ್ ಮೂರು ಚಮಚ ಕ್ರಮವಾಗಿ ಹಾಕಿ ಮಿಕ್ಸ್ ಮಾಡಬೇಕು.

*ಒಲೆಯನ್ನು ಆರಿಸಿ, ಪ್ಯಾನ್‌ನಲ್ಲಿ ತಾಳಿಸಿದ ಎಲ್ಲವನ್ನೂ ಒಂದು ಬೌಲ್‌ಗೆ ಸುರಿದುಕೊಂಡು ಅದರ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ, ಬಿಸಿಬಿಸಿಯಾದ ಆಲೂ ಮಂಚೂರಿ ಸವಿಯಲು ಸಿದ್ಧ. ಇದನ್ನು ಟೊಮೇಟೊ ಕೆಚಪ್ ಜೊತೆ ತಿಂದರೆ ಅದರ ರುಚಿ ದ್ವಗುಣವಾಗುವುದರಲ್ಲಿ ಸಂಶಯವೇ ಇಲ್ಲ. ಸಂಜೆ ಹೊತ್ತು ಚಹಾದೊಂದಿಗೆ ಈ ರೆಸಿಪಿ ಮಾಡಿ ತಿಂದರೆ ನಾಲಿಗೆಗೆ ರುಚಿ, ಮನಸ್ಸಿಗೆ ಮುದ ಕೊಡುತ್ತದೆ.

ಈ ಆಲೂಗೆಡ್ಡೆಯಲ್ಲಿ ವಿಟಮಿನ್ ಬಿ6, ಬಿ3, ನಾರಿನಂಶ, ಪೊಟಾಶಿಯಮ್ ಮುಂತಾದ ಪೌಷ್ಟಿಕಾಂಶಗಳಿರುವುದರಿಂದ ಮಕ್ಕಳ ಬೆಳವಣಿಗೆಗೆ ಬಹಳ ಸಹಾಯಕಾರಿ.


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್