ಬೊಂಬಾಟ್ ರುಚಿ: ಘಮ್ಮೆನ್ನುವ ಸೌತೆಕಾಯಿ ಸಾಂಬಾರ್

ದೇಶ ವಿದೇಶಗಳಲ್ಲಿ ಉಡುಪಿ ಹೋಟೆಲುಗಳು ಖ್ಯಾತಿ ಪಡೆಯಲು ಕಾರಣವೇನು ಎಂದು ತಿಳಿದಿದೆಯೇ? ಈ ಹೋಟೆಲಿನ ಸಾಂಬಾರ್ ಮತ್ತು ಮಸಾಲೆ ದೋಸೆ. ಇಡ್ಲಿ ಮತ್ತಿತರ ತಿಂಡಿಗಳೊಂದಿಗೆ ಸಾಂಬಾರ್ ಸೇರಿಸಿ ತಿಂದರೆ ಆ ರುಚಿಗೆ ಮನಸೋಲದವರೇ ಇಲ್ಲ. ಅದರಲ್ಲೂ ಉಡುಪಿ ಹೋಟೆಲಿನ ಸೌತೆಕಾಯಿ ಸಾಂಬರ್ ಹಾಗೂ ಮೂಲಂಗಿ ಸಾಂಬಾರ್‌ನ ಹೆಸರು ಕೇಳಿದರೆನೇ ಬಾಯಲ್ಲಿ ನೀರೂರುತ್ತದೆ, ಅಷ್ಟೊಂದು ಸ್ವಾದಭರಿತವಾಗಿರುತ್ತದೆ ಈಗ ನಿಮಗೂ, ಈ ರೀತಿಯ ಸಾಂಬರ್ ಅನ್ನು ತಯಾರಿಸಲು ಆಸೆಯಾಗುತ್ತಿರಬಹುದು 

ಅಲ್ಲವೇ? ಅದಕ್ಕೆಂದೇ ಬೋಲ್ಡ್ ಸ್ಕೈ ಇಂದು ರುಚಿ ರುಚಿಯಾಗಿರುವ ಸೌತೆಕಾಯಿ ಸಾಂಬಾರ್ ಅನ್ನು ಪರಿಚಯಿಸುತ್ತಿದ್ದು, ಸರಳವಾಗಿ ನೀವೂ ಮನೆಯಲ್ಲಿಯೇ ಮಾಡಬಹುದು. ಅಷ್ಟೇ ಏಕೆ, ಇದಕ್ಕಾಗಿ ಪೇಟೆಯ ಸಾಂಬಾರ್ ಪುಡಿ ಉಪಯೋಗಿಸುವ ಅಗತ್ಯವೇ ಇಲ್ಲ. ಇದನ್ನು ಅನ್ನದೊಂದಿಗೆ, ಇಡ್ಲಿ, ದೋಸೆ ಮೊದಲಾದವುಗಳೊಂದಿಗೆ ಸೇವಿಸಬಹುದು. ಇನ್ನೇಕೆ ತಡ? ಯಾವಾಗಲೂ ಒಂದೇ ಬಗೆಯ ಸಾಂಬಾರ್ ಸೇವಿಸುವುದಕ್ಕಿಂತ ಇದರಲ್ಲೇ ಹೊಸ ಪ್ರಯೋಗವನ್ನು ಮಾಡಿ ನಿಮ್ಮ ಮನೆಯವರಿಂದ ಶಹಬ್ಬಾಷ್ ಗಿರಿ ಪಡೆದುಕೊಳ್ಳುವ ಸುವರ್ಣವಕಾಶವನ್ನು ಮಿಸ್ ಮಾಡಿಕೊಳ್ಳದಿರಿ... ಮುಂದೆ ಓದಿ

ಪ್ರಮಾಣ: 4 

*ಸಿದ್ಧತಾ ಸಮಯ: 15 ನಿಮಿಷಗಳು 

*ಅಡುಗೆಗೆ ಬೇಕಾದ ಸಮಯ: 25 ನಿಮಿಷಗಳು 

ಸಾಮಾಗ್ರಿಗಳು 


*ಮಧ್ಯಮ ಗಾತ್ರದ ಸೌತೆಕಾಯಿ - 1 (ಸಣ್ಣದಾಗಿ ತುಂಡುಮಾಡಿಕೊಂಡಿದ್ದು) 

*ಬೇಳೆ - 1 ಕಪ್ 

*ಕಪ್ಪು ಬೀಜದ ಬೀನ್ಸ್ - 1 ಕಪ್

 *ಬೆಲ್ಲ - 2 ಚಮಚ 

*ಅರಿಶಿನ - 1/4 ಚಮಚ 

*ಉಪ್ಪು ರುಚಿಗೆ ತಕ್ಕಷ್ಟು 

ಸಾಮಾಗ್ರಿಗಳು (ಸಾಂಬಾರ್ ಮಸಾಲೆಗಾಗಿ)


 *ತುರಿದ ತೆಂಗಿನಕಾಯಿ - 2 ಕಪ್ಸ್ 

*ಕೊತ್ತಂಬರಿ ಬೀಜ - 2 ಚಮಚ

 *ಕೆಂಪು ಮೆಣಸು - 3 

*ಉದ್ದಿನ ಬೇಳೆ - 2 ಚಮಚ 

*ಚನ್ನಾ ದಾಲ್ (ಕಡಲೆಬೇಳೆ)- 2 ಚಮಚ

 *ಜೀರಿಗೆ - 1/2 ಚಮಚ 

*ಮೆಂತೆ - 1/2 ಚಮಚ

 *ಹುಣಸೇ ಹಣ್ಣು ಪೇಸ್ಟ್ - 2 ಚಮಚ 

*ಕರಿಬೇವು - 1 ಎಸಳು 

*ಇಂಗು - 1 ಚಿಟಿಕೆ

 *ಅಡುಗೆಗೆ ಬೇಕಾದ ಎಣ್ಣೆ - 1ಚಮಚ 

ಸಾಮಾಗ್ರಿಗಳು (ಒಗ್ಗರಣೆಗಾಗಿ)

 *ಕೆಂಪು ಮೆಣಸು - 1

 *ಮೆಂತೆ - 1 ಚಮಚ

 *ಕರಿಬೇವು - 1 ಎಸಳು

 *ಅಡುಗೆಗೆ ಬೇಕಾದ ಎಣ್ಣೆ - 1/2 ಚಮಚ


ಮಾಡುವ ವಿಧಾನ


 1. ಕಪ್ಪು ಬೀಜದ ಬೀನ್ಸ್ ಅನ್ನು ತೊಳೆದು ನೀರಿನಲ್ಲಿ ಮುಳುಗಿಸಿಡಿ, ರಾತ್ರಿಪೂರ್ತಿ ಹಾಗೆಯೇ ಇರಲಿ. ಮರುದಿನ ಬೆಳಗ್ಗೆ, ಪ್ರೆಶ್ಶರ್ ಕುಕ್ಕರ್‎ನಲ್ಲಿ ಬೇಯಿಸಿಕೊಳ್ಳಿ. 1 ವಿಶಲ್ ಬಂದ ನಂತರ ಸ್ಟವ್ ಆಫ್ ಮಾಡಿ.

 2. ನಂತರ ಅದನ್ನು ಪಕ್ಕದಲ್ಲಿರಿಸಿಕೊಳ್ಳಿ 

3. ತೊಗರಿ ಬೇಳೆಯನ್ನು ತೊಳೆದುಕೊಳ್ಳಿ ಮತ್ತು ಅರಿಶಿನ, ನೀರು ಹಾಗೂ ಸ್ವಲ್ಪ ಎಣ್ಣೆಯನ್ನು ಇದಕ್ಕೆ ಹಾಕಿ.

 4. ಇನ್ನು ತೊಗರಿ ಬೇಳೆಯನ್ನು ಪ್ರೆಶ್ಶರ್ ಕುಕ್ಕರ್‎ಗೆ ಹಾಕಿ ಮತ್ತು ಮೂರು ವಿಶಲ್ ಬರುವವರೆಗೆ ಬೇಯಿಸಿಕೊಳ್ಳಿ. ತೊಗರಿಬೇಳೆಯನ್ನು ಮೆತ್ತಗೆ ಮಾಡಿಕೊಳ್ಳದಿರಿ. 

5. ಈಗ, ಸೌತೆಕಾಯಿ ತುಂಡುಗಳನ್ನು ಹಾಕಿ, ಇದೇ ಕುಕ್ಕರ್‎ಗೆ ನೀರು ಮತ್ತು ಉಪ್ಪು ಹಾಕಿ ನಂತರ ಎರಡು ವಿಶಲ್ ಬರುವವರೆಗೆ ಬೇಯಿಸಿ. ಈಗ ಬೇಳೆ ಸಂಪೂರ್ಣವಾಗಿ ಮೆತ್ತಗಾಗುತ್ತದೆ. 

6. ಇನ್ನು ತಳ ಆಳವಿರುವ ಪಾತ್ರೆಯನ್ನು ಬಳಸಿಕೊಂಡು ಕೆಂಪು ಮೆಣಸು, ಉದ್ದಿನ ಬೇಳೆ, ಚನ್ನಾ ದಾಲ್ (ಕಡಲೆಬೇಳೆ), ಜೀರಿಗೆ, ಕೊತ್ತಂಬರಿ, ಮೆಂತೆ ಮತ್ತು ಇಂಗನ್ನು ಹುರಿದುಕೊಳ್ಳಿ. ಇದಕ್ಕೆ 1 ಚಮಚ ಎಣ್ಣೆಯನ್ನು ಮಾತ್ರ ಬಳಸಿ. 

7. ಈಗ ಹುರಿದ ಮಸಾಲೆ ಸಾಮಾಗ್ರಿಗಳನ್ನು ಎತ್ತಿಡಿ ಮತ್ತು ಎಲ್ಲವನ್ನೂ ಗ್ರೈಂಡರ್‎ಗೆ ಹಾಕಿಕೊಳ್ಳಿ. ತುರಿದ ತೆಂಗಿನ ತುರಿಯನ್ನು ಇತರ ಮಸಾಲೆಗೆ ಹಾಕಿಕೊಳ್ಳಿ. 

8. ನಿಧಾನವಾಗಿ ನೀರು ಬೆರೆಸಿಕೊಳ್ಳಿ. ಜಾಸ್ತಿ ನೀರನ್ನು ಹಾಕದಿರಿ. 

9. ಎಲ್ಲಾ ಸಾಮಾಗ್ರಿಗಳನ್ನು ಗ್ರೈಂಡ್ ಮಾಡಿಕೊಳ್ಳಿ ಮತ್ತು ದಪ್ಪ ಮಸಾಲೆ ಸಿದ್ಧಪಡಿಸಿ.

 10. ಪ್ರೆಶ್ಶರ್ ಕುಕ್ಕರ್‎ಗೆ ಇದನ್ನು ಸೇರಿಸಿಕೊಳ್ಳಿ ಇದರಲ್ಲಿ ಈಗಲೇ ತೊ‎ಗರಿಬೇಳೆ ಮತ್ತು ಸೌತೆಕಾಯಿ ಬೇಯಿಸಿರುತ್ತೀರಿ. ಕಪ್ಪು ಬೀನ್ಸ್ ಅನ್ನು ಕುಕ್ಕರ್‌ಗೆ ಸೇರಿಸಿಕೊಳ್ಳಿ 

11. ಸಾಕಷ್ಟು ಪ್ರಮಾಣದಲ್ಲಿ ನೀರು ಬೆರೆಸಿಕೊಳ್ಳಿ. ಇದಕ್ಕೆ ಬೆಲ್ಲ ಮತ್ತು ನೀರು ಹಾಕಿ. 

12. ಸಾಂಬಾರ್ ಅನ್ನು 10-15 ನಿಮಿಷಗಳ ಕಾಲ ಕುದಿಸಿ 

13. ಈಗ ಪ್ರತ್ಯೇಕ ಪಾತ್ರೆಯನ್ನು ತೆಗೆದುಕೊಂಡು, ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಕೆಂಪು ಮೆಣಸು, ಮೆಂತೆ ಹಾಗೂ ಕರಿಬೇವನ್ನು ಇದಕ್ಕೆ ಸೇರಿಸಿಕೊಳ್ಳಿ. ನಿಮ್ಮ ಸಾಂಬಾರ್ ಸಿದ್ಧಗೊಂಡಾಗ, ಈ ಮಿಶ್ರಣದೊಂದಿಗೆ ಒಗ್ಗರಣೆ ಮಾಡಿಕೊಳ್ಳಿ. 

14. ನಿಮ್ಮ ಸೌತೆಕಾಯಿ ಸಾಂಬಾರ್ ಸಿದ್ಧಗೊಂಡಿದೆ. ಈಗ ಬಿಸಿ ಬಿಸಿ ಸಾಂಬಾರ್ ಅನ್ನು ಅನ್ನ, ಚಪಾತಿ ಮತ್ತು ದೋಸೆಯೊಂದಿಗೆ ಸೇವಿಸಬಹುದಾಗಿದೆ.




Comments

Popular posts from this blog

ರುಚಿ ರುಚಿ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕಿ

ರುಚಿಕರವಾಗಿ ಗಿರಮಿಟ್ಟು ತಯಾರಿಸುವುದು ಹೇಗೆ?

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ