ಆಹಾ ಚನ್ನಾ ಮಸಾಲಾ ಕರಿ, ಬೊಂಬಾಟ್ ರುಚಿ

ಉದ್ಯೋಗಸ್ಥ ಮಹಿಳೆಯರ ಗಮನಕ್ಕೆ: ನಿಮಗೆ ಬೆಳಗ್ಗಿನ ಉಪಾಹಾರಕ್ಕೆ ಅಥವಾ ರಾತ್ರಿಯ ಊಟಕ್ಕೆ ಚಪಾತಿ, ರೊಟ್ಟಿಯ ಜೊತೆ ನಂಜಿಕೊಳ್ಳಲು ಕಡಿಮೆ ಸಮಯದಲ್ಲಿ ಮತ್ತು ರುಚಿಕರವೂ ಆಗಿರುವ ಯಾವುದಾದರೂ ಹೊಸರುಚಿ ಬೇಕೇ? ಹಾಗಿದ್ದರೆ ಚನಾ ಮಸಾಲಾ ಕರಿ ನಿಮಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಉದ್ಯೋಗಸ್ಥ ಮಹಿಳೆಯರ ನಿತ್ಯದ ಚಿಂತೆಯ ವಿಷಯವಾಗಿರುವ "ಇವತ್ತೇನು ಅಡುಗೆ ಮಾಡಲಿ" ಎಂಬ ಪ್ರಶ್ನೆಗೆ ಚನ್ನಾ ಮಸಾಲಾ ಕರಿ ಒಂದು ಸಮರ್ಪಕ ಉತ್ತರವಾಗಲಿದೆ. ಏಕೆಂದರೆ ಅತ್ತ ಔದ್ಯೋಗಿಕ, ಇತ್ತ ಕೌಟುಂಬಿಕ ಜೀವನವನ್ನು ನಿಭಾಯಿಸುತ್ತಿರುವ ನಿಮಗೆ ಸಮಯದ ಮೌಲ್ಯ ಏನೆಂದು ಇತರರಿಗಿಂತ ಹೆಚ್ಚು ಗೊತ್ತು. 

ಹೆಸರೇ ಸೂಚಿಸುವಂತೆ ಇದರ ಮುಖ್ಯ ಸಾಮಾಗ್ರಿ ಎಂದರೆ ಚನ್ನಾ ಅಥವಾ ಕಡ್ಲೆ ಕಾಳು. ಈ ರೆಸಿಪಿಗೆ ಕಪ್ಪು ಕಡಲೆಕಾಳಿಗಿಂತ ಬಿಳಿಯ ಕಾಬೂಲ್ ಕಡಲೆಯೇ ಉತ್ತಮ. ಇದು ಕಡಿಮೆ ಸಮಯದಲ್ಲಿ ತಯಾರಾಗುವುದಾದರೂ ರುಚಿಗೆ ಮಾತ್ರ ಯಾವುದೇ ದುಬಾರಿ ಹೋಟೆಲಿನ ಮೆನು ಐಟಂಗಿಂತ ಕಡಿಮೆಯಿಲ್ಲ. ಆದರೆ ಒಂದೇ ಒಂದು ಹೆಚ್ಚುವರಿ ಕೆಲಸವೆಂದರೆ ರಾತ್ರಿ ಮಲಗುವ ಮುನ್ನ ಕಡಲೆಕಾಳನ್ನು ನೀರಿನಲ್ಲಿ ನೆನೆಸಿಡುವುದು. ಬೆಳಿಗ್ಗೆ ಇದನ್ನು ಕುಕ್ಕರಿನಲ್ಲಿ ಬೇಯಿಸುವುದು. ಜಾಣತನವೆಂದರೆ ರಾತ್ರಿ ಕುಕ್ಕರಿನಲ್ಲಿಯೇ ನೆನೆಸಿಟ್ಟು ಒಲೆಯ ಮೇಲಿಡುವುದು. ಬೆಳಿಗ್ಗೆದ್ದ ತಕ್ಷಣ ಒಲೆ ಉರಿಸಿ ನಿಮ್ಮ ಇತರ ಕೆಲಸಗಳ ನಡುವೆ ಐದಾರು ಸೀಟಿ ಬಂದರೆ ಮುಕ್ಕಾಲು ಕೆಲಸ ಮುಗಿದಂತೆಯೇ ಸರಿ. ಇನ್ನುಳಿದಂತೆ ಹೆಚ್ಚಿನ ಶ್ರಮವಿಲ್ಲ. ಬನ್ನಿ ಇದರ ವಿಧಾನವನ್ನು ಈಗ ಅರಿಯೋಣ: ಚಳಿಯಲ್ಲಿ ಚನ್ನಾ ಮಸಾಲಾ ರುಚಿ ನೋಡಿ

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್

 *ಸಿದ್ಧತಾ ಸಮಯ: ಹದಿನೈದು ನಿಮಿಷಗಳು

 *ತಯಾರಿಕಾ ಸಮಯ: ಹತ್ತು ನಿಮಿಷಗಳು 

ಅಗತ್ಯವಿರುವ ಸಾಮಾಗ್ರಿಗಳು: 


*ಕಡ್ಲೆಕಾಳು: ಮುನ್ನೂರು ಗ್ರಾಂ (ರಾತ್ರಿಯಿಡೀ ನೆನೆಸಿದ್ದು)

 *ಹಸಿಮೆಣಸು: ನಾಲ್ಕರಿಂದ ಐದು 

*ಈರುಳ್ಳಿ: ಒಂದು ಕಪ್ ಚಿಕ್ಕದಾಗಿ ಹೆಚ್ಚಿದ್ದು

 *ಶುಂಠಿ ಬೆಳ್ಳುಳ್ಳಿ ಪೇಸ್ಟ್ : ಅರ್ಧ ಚಿಕ್ಕಚಮಚ 

*ಅರಿಶಿನ ಪುಡಿ - 1/4 ಚಿಕ್ಕ ಚಮಚ 

*ಟೊಮೇಟೊ - 2 ಮಧ್ಯಮ ಗಾತ್ರದ್ದು 

*ಗರಂ ಮಸಾಲಾ ಪುಡಿ- 1/2 ಚಿಕ್ಕಚಮಚ

*ಕೆಂಪು ಮೆಣಸಿನ ಪುಡಿ -1/2 ಚಿಕ್ಕಚಮಚ 

*ಜೀರಿಗೆ - 1/4 ಚಿಕ್ಕಚಮಚ 

*ಸಾಸಿವೆ - 1/4 ಚಿಕ್ಕಚಮಚ 

*ಕೊತ್ತಂಬರಿ ಸೊಪ್ಪು - 4 ರಿಂದ 5 ದಂಟುಗಳು

 *ಎಣ್ಣೆ: ಅಗತ್ಯಕ್ಕೆ ತಕ್ಕಂತೆ 

*ಉಪ್ಪು: ರುಚಿಗನುಸಾರ. 

ವಿಧಾನ:



1) ಮೊದಲು ಕುಕ್ಕರಿನಲ್ಲಿ ನೆನೆಸಿಟ್ಟಿದ್ದ ಕಡ್ಲೆಕಾಳುಗಳನ್ನು ಸುಮಾರು ನಾಲ್ಕರಿಂದ ಐದು ಸೀಟಿ ಬರುವವರೆಗೆ ಬೇಯಿಸಿ. 

2) ಕುಕ್ಕರ್ ತಣಿಸಿ ಮುಚ್ಚಳ ತೆರೆದ ಬಳಿಕ ಹೆಚ್ಚಿನ ನೀರನ್ನು ಬಸಿದು ಬೆಂದ ಕಡ್ಲೆಕಾಳುಗಳನ್ನು ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ 

3) ಮಿಕ್ಸಿಯ ದೊಡ್ಡ ಜಾರ್ ನಲ್ಲಿ ಟೊಮೇಟೊಗಳನ್ನು ಹಾಕಿ ಗೊಟಾಯಿಸಿ ದ್ರವವಾಗಿಸಿ (ಬದಲಿಗೆ ಟೊಮೇಟೊ ಪ್ಯೂರಿಯನ್ನೂ ಬಳಸಬಹುದು) 

4) ಒಂದು ದಪ್ಪ ತಳದ ಪಾತ್ರೆ ಅಥವಾ ಬಾಣಲೆಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ ಕೊಂಚ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಈರುಳ್ಳಿ, ಸೀಳಿದ ಹಸಿಮೆಣಸು ಹಾಕಿ ಕೊಂಚ ಹುರಿಯಿರಿ.

 5) ಈರುಳ್ಳಿ ಕೊಂಚ ಕಂದುಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ತಿರುವಿ. 

6) ಬಳಿಕ ಗರಂ ಮಸಾಲಾ ಪುಡಿ, ಮೆಣಸಿನ ಪುಡಿ, ಟೊಮೇಟೊ ಪ್ಯೂರಿ ಹಾಕಿ ಇನ್ನೂ ಕೊಂಚ ಹೊತ್ತು ಬೇಯಿಸಿ. 

7) ಈ ಮಸಾಲೆಯಿಂದ ಕೊಂಚ ನೀರು ಬಿಡುತ್ತಿದ್ದಂತೆಯೇ ಬೆಂದ ಕಡ್ಲೆಕಾಳು ಹಾಕಿ ಮಿಶ್ರಣ ಮಾಡಿ. 

8) ಈಗ ಉಪ್ಪು ಹಾಕಿ ಮಿಶ್ರಣ ಮಾಡಿ ಉರಿ ಆರಿಸಿ. 

9) ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ 

10) ಮನೆಯ ಸದಸ್ಯರಿಗೆ ರೊಟ್ಟಿ, ಚಪಾತಿ, ಬ್ರೆಡ್, ದೋಸೆ ಮೊದಲಾದವುಗಳೊಂದಿಗೆ ಸವಿಯಲು ನೀಡಿ, ಪ್ರಶಂಸೆಗಳಿಸಿ. ಕೆಲವರು ಇದಕ್ಕೆ ಕೊಂಚ ಲಿಂಬೆರಸವನ್ನು ಸೇರಿಸಿದರೆ ಹೆಚ್ಚು ಇಷ್ಟಪಡುತ್ತಾರೆ.






Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್