ಡ್ರೈ ಫ್ರೂಟ್ಸ್ ಪಲಾವ್: ಒಮ್ಮೆ ಮಾಡಿ, ಸವಿದು ನೋಡಿ!

ಮಕ್ಕಳಿಗೆ ಹಸಿವನ್ನು ಹೆಚ್ಚು ಹೊತ್ತು ತಡೆದು ಹಿಡಿಯಲಿಕ್ಕಾಗುವುದಿಲ್ಲ. ಅಂತೆಯೇ ಸಂಜೆ ಆಟವಾಡಿ ಮನೆಯೊಳಕ್ಕೆ ಬರುತ್ತಿದ್ದಂತೆಯೇ 'ಅಮ್ಮಾ, ತಿನ್ನಲಿಕ್ಕೇನಾದರೂ ಕೊಡು' ಎಂಬ ಬೇಡಿಕೆಯನ್ನು ಹೊತ್ತೇ ಒಳಬರುತ್ತಾರೆ. ನಿಮ್ಮಿಂದ ಕೊಂಚ ತಡವಾಯಿತೋ, ತಟ್ಟೆಗಳಿಗೆ ಚಮಚದಿಂದ ಬಡಿಯಲು ತೊಡಗುತ್ತಾರೆ. 

ಈ ಸಮಯದಲ್ಲಿ ಹೆಚ್ಚಿನ ತಾಯಂದಿರು ಸಿದ್ಧ ಆಹಾರಗಳನ್ನು ಅಥವಾ ಚಾಕಲೇಟು, ಬಿಸ್ಕತ್ ಮೊದಲಾದ ತಿಂಡಿಗಳನ್ನೂ ತಿನ್ನಿಸಿ ಮಕ್ಕಳನ್ನು ಸುಮ್ಮನಾಗಿಸುತ್ತಾರೆ. ಆದರೆ ಅಧಿಕ ಕ್ಯಾಲೋರಿಗಳನ್ನು ಹೊಂದಿರುವ ಈ ಆಹಾರಗಳು ಮಕ್ಕಳ ಸ್ಥೂಲಕಾಯಕ್ಕೆ ಮೂಲವಾಗಿವೆ. ಇದರ ಬದಲಿಗೆ ಪೌಷ್ಟಿಕವೂ, ಮಕ್ಕಳು ಇಷ್ಟಪಡುವಂತಹದ್ದೂ, ಶೀಘ್ರವೇ ಸಿದ್ಧವಾಗುವಂತಹದ್ದೂ ಆದ ತಿಂಡಿಯನ್ನು ಮಕ್ಕಳಿಗೆ ತಿನಿಸುವುದು ಆರೋಗ್ಯಕರವಾಗಿದೆ.

 ಈ ಹೊತ್ತಿಗಾಗಿ ಡ್ರೈ ಫ್ರೂಟ್ಸ್ ಪಲಾವ್ ಅತ್ಯುತ್ತಮವಾದ ಆಯ್ಕೆಯಾಗಿದೆ.ಇದರಲ್ಲಿ ಉಪಯೋಗಿಸಲಾಗಿರುವುದು ಅನ್ನ, ಸುಲಭವಾದ ಮನೆಯಲ್ಲಿಯೇ ಲಭ್ಯವಿರುವ ಸಾಂಬಾರ ಪದಾರ್ಥಗಳು ಹಾಗೂ ಒಂದು ಹಿಡಿಯಷ್ಟು ನಿಮ್ಮಿಷ್ಟದ ಒಣಫಲಗಳು. ಒಣಫಲಗಳ ಸ್ವಾದ ಹೆಚ್ಚಿಸಲು ಸಾಂಬಾರ ಪದಾರ್ಥಗಳ ಪ್ರಮಾಣವನ್ನು ಕೊಂಚ ಕಡಿಮೆ ಮಾಡಲಾಗಿದೆ. ಈ ಬಟಾಣಿ ಪಲಾವ್ ಮಾಡುವುದು ಬಲು ಸುಲಭ

ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಗೂ ಅಚ್ಚುಮೆಚ್ಚಿನದ್ದಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಈ ಪಲಾವ್ ಅನ್ನು ಕೊಂಚ ಹೆಚ್ಚು ಹೊತ್ತು ಬಿಸಿಯಾಗಲು ಇರಿಸಿದರೆ ಇನ್ನಷ್ಟು ರುಚಿಕರವಾಗಿರುವುದು ಕಂಡುಬಂದಿದೆ. ಇನ್ನೇಕೆ ತಡ? ಸ್ವಾದಿಷ್ಟವಾದ ಪಲಾವ್ ಮಾಡುವ ವಿಧಾನವನ್ನು ಕೆಳಗೆ ನೀಡಲಾಗಿದೆ.

 ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು 

ಸಿದ್ಧತಾ ಸಮಯ: ಹದಿನೈದು ನಿಮಿಷಗಳು 

ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು. 

ಅಗತ್ಯವಿರುವ ಸಾಮಾಗ್ರಿಗಳು


 *ಅಕ್ಕಿ- ಎರಡು ಕಪ್ (ಬಾಸ್ಮತಿ ಉತ್ತಮ ಆಯ್ಕೆ. ಇಲ್ಲದಿದ್ದರೆ ಬಿರಿಯಾನಿಗೆ ಸೂಕ್ತವಾದ ಯಾವುದೇ ಅಕ್ಕಿ)-ಚೆನ್ನಾಗಿ ತೊಳೆದು ನೀರು ಬಸಿದು ಒಣಗಿಸಿದ್ದು. 

*ಬಾದಾಮಿ - ಹತ್ತು (ಒಂದೊಂದನ್ನು ನಾಲ್ಕು ತುಂಡಾಗಿಸಿ)

 *ಒಣದ್ರಾಕ್ಷಿ - ಹತ್ತು

 *ಗೋಡಂಬಿ - ಹತ್ತು (ಒಂದೊಂದನ್ನು ಆರು ತುಂಡಾಗಿಸಿ) 

*ತುಪ್ಪ - ಎರಡು ದೊಡ್ಡಚಮಚ

 *ಕಾಳುಮೆಣಸು (ಇಡಿಯದ್ದು) - ಒಂದು ಚಿಕ್ಕ ಚಮಚ 

*ಉಪ್ಪು- ರುಚಿಗನುಸಾರ

 *ದಾಲ್ಚಿನ್ನಿ ಎಲೆ - ಎರಡು (ಇಡಿಯ) *ಕೇಸರಿ-ಒಂದು ಚಿಟಿಕೆ

ವಿಧಾನ:

 

 1) ನಾನ್ ಸ್ಟಿಕ್ ಪಾತ್ರೆಯೊಂದರಲ್ಲಿ ಕೊಂಚ ನೀರು ತುಂಬಿಸಿ ಕುದಿಸಿ ಬದಿಗಿಡಿ.

 2) ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗುತ್ತಿದ್ದಂತೆಯೇ ದಾಲ್ಚಿನ್ನಿ ಎಲೆ, ಕಾಳುಮೆಣಸು, ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ಕೊಂಚ ಕೆಂಪು ಬಣ್ಣ ಬರುತ್ತಿದ್ದಂತೆಯೇ ಇದಕ್ಕೆ ಅಕ್ಕಿ ಹಾಕಿ ಸುಮಾರು ಎರಡು ನಿಮಿಷಗಳ ವರೆಗೆ ಹುರಿಯಿರಿ. 

3) ಈಗ ಉಪ್ಪು ಮತ್ತು ಕೇಸರಿ ಹಾಕಿ ಅರ್ಧ ನಿಮಿಷ ಹುರಿಯಿರಿ.

 4) ಇದಕ್ಕೆ ಕುದಿಸಿಟ್ಟ ನೀರಿನಿಂದ ಮೂರು ಕಪ್ ನೀರು ಹಾಕಿ ಸ್ವಲ್ಪ ತಿರುವಿ ಕುದಿಯಲು ಬಿಡಿ 

5) ಕುದಿ ಬಂದ ಬಳಿಕ ಉರಿಯನ್ನು ಚಿಕ್ಕದಾಗಿಸಿ ಪಾತ್ರೆಯ ಮುಚ್ಚಳ ಮುಚ್ಚಿ ಹಬೆಯಲ್ಲಿ ಅಕ್ಕಿ ಬೇಯುವಂತೆ ಮಾಡಿ.

 6) ಸುಮಾರು ನಾಲ್ಕು ಅಥವಾ ಐದು ನಿಮಿಷದ ಬಳಿಕ ಅಕ್ಕಿ ಬೆಂದಿದೆಯೇ ಪರೀಕ್ಷಿಸಿ ಬೆಂದಿದ್ದರೆ ಉರಿಯನ್ನು ನಂದಿಸಿ ಮುಚ್ಚಳವನ್ನು ಇನ್ನೂ ಕೊಂಚ ಹೊತ್ತು ಮುಚ್ಚಿಯೇ ಇರಿಸಿ.

 7) ಮಕ್ಕಳು ಒಳಬಂದ ಬಳಿಕ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಲು ಹೇಳಿ ಆ ವೇಳೆಯಲ್ಲಿ ಕೆಲವು ತರಕಾರಿಗಳನ್ನು ಚಿಕ್ಕದಾಗಿ ಹೆಚ್ಚಿ ಕೊತ್ತಂಬರಿ, ಮೊಸರು ಹಸಿಮೆಣಸು ಹಾಕಿ ಕೋಸಂಬರಿ ಮಾಡಿ. ಮಕ್ಕಳು ತುಂಬಾ ಇಷ್ಟಪಟ್ಟು ಈ ಪಲಾವನ್ನು ತಿನ್ನುವುದನ್ನು ನೋಡಿ ತೃಪ್ತಿಪಟ್ಟುಕೊಳ್ಳಿ. ಇದರ ಬದಲಿಗೆ ಸಿಹಿ ರಾಯತಾವನ್ನೂ ಬಡಿಸಬಹುದು.




Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್