ಸರಳ ತಯಾರಿಕೆಯ ಹರಿಕಾರ ಮೂಲಂಗಿ ಸಾಂಬಾರ್

ದೇಶವಿದೇಶಗಳಲ್ಲಿ ಉಡುಪಿ ಹೋಟೆಲುಗಳು ಖ್ಯಾತಿ ಪಡೆಯಲು ಕಾರಣವೇನು ಎಂದು ತಿಳಿದಿದೆಯೇ? ಈ ಹೋಟೆಲಿನ ಸಾಂಬಾರ್ ಮತ್ತು ಮಸಾಲೆ ದೋಸೆ. ಇಡ್ಲಿ ಮತ್ತಿತರ ತಿಂಡಿಗಳೊಂದಿಗೆ ಸಾಂಬಾರ್ ಸೇರಿಸಿ ತಿಂದರೆ ಆ ರುಚಿಗೆ ಮನಸೋಲದವರೇ ಇಲ್ಲ. ಅದರಲ್ಲೂ ಉಡುಪಿ ಹೋಟೆಲಿನ ಮೂಲಂಗಿ ಸಾಂಬಾರ್ ರುಚಿಯಲ್ಲಿ ಅದ್ವಿತೀಯ.

ಬಿಸಿಯಾಗಿದ್ದಾಗ ಅತಿ ರುಚಿಯಾಗಿರುವ ಈ ಸಾಂಬಾರ್ ಅನ್ನು ಈಗ ನೀವು ಮನೆಯಲ್ಲಿಯೇ ತಯಾರಿಸಬಹುದು. ಅಲ್ಲದೇ ಇದಕ್ಕಾಗಿ ಪೇಟೆಯ ಸಾಂಬಾರ್ ಪುಡಿ ಉಪಯೋಗಿಸುವ ಅಗತ್ಯವೇ ಇಲ್ಲ. ಇದನ್ನು ಅನ್ನದೊಂದಿಗೆ, ಇಡ್ಲಿ, ದೋಸೆ ಪೊಂಗಲ್ ಮೊದಲಾದವುಗಳೊಂದಿಗೆ ಸೇವಿಸಬಹುದು.

ಈ ಸಾಂಬಾರ್‌ನಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ, ಫೋಲಿಕ್ ಆಮ್ಲ, ವಿಟಮಿನ್ ಬಿ6 ಸಹಿತ ವಿವಿಧ ವಿಟಮಿನ್‌ಗಳು, ಕ್ಯಾಲ್ಸಿಯಂ ಮೊದಲಾದ ಪೋಷಕಾಂಶಗಳು ಇದನ್ನೊಂದು ಆರೋಗ್ಯಕರ ಆಹಾರವಾಗಿಸಿದೆ. ಇಂದೇ ಈ ಸಾಂಬಾರ್ ತಯಾರಿಸಿ ಮನೆಯವರೆಲ್ಲರ ಮನಗೆಲ್ಲಲು ತಯಾರಾಗಿ.

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

 ಸಿದ್ಧತಾ ಸಮಯ: ಹದಿನೈದು ನಿಮಿಷಗಳು 

ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು. 

ರುಚಿಯಾಗಿರುತ್ತೆ ಈ ಮೂಲಂಗಿ ಪಾಲಾಕ್ ಪಲ್ಯ 

ಅಗತ್ಯವಿರುವ ಸಾಮಾಗ್ರಿಗಳು


 *ತೊಗರಿ ಬೇಳೆ - 1/3 ಕಪ್

 *ಹುಣಸೆ ಹುಳಿಯ ನೀರು- 10 ಮಿಲೀ 

*ಅರಿಶಿನ ಪುಡಿ: ½ ಚಿಕ್ಕಚಮಚ 

*ಈರುಳ್ಳಿ - 1 

*ಮೂಲಂಗಿ - 3

 *ಕೊತ್ತೊಂಬರಿ- 1 ದೊಡ್ಡಚಮಚ 

*ಕಡ್ಲೆಬೇಳೆ - 1 ½ ಚಿಕ್ಕಚಮಚ 

*ಒಣಮೆಣಸು - 4 

*ಕಾಯಿತುರಿ -2 ಚಿಕ್ಕ ಚಮಚ 

*ಅಕ್ಕಿಹಿಟ್ಟು -1/4 ಚಿಕ್ಕಚಮಚ

 *ಎಣ್ಣೆ - 2 ಚಿಕ್ಕ ಚಮಚ 

*ಸಾಸಿವೆ- ¼ ಚಿಕ್ಕ ಚಮಚ

*ಮೆಂತೆ - ¼ ಚಿಕ್ಕ ಚಮಚ

 *ಇಂಗು - ಒಂದು ಚಿಟಿಕೆ 

*ಬೇವಿನ ಎಲೆಗಳು - ಕೆಲವು (ಒಗ್ಗರಣೆಗೆ)

 *ಉಪ್ಪು - ರುಚಿಗನುಸಾರ. 

ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು. 

ತಯಾರಿಕಾ ವಿಧಾನ:


 1) ತೊಗರಿಬೇಳೆಯನ್ನು ಸುಮಾರು ಹದಿನೈದು ನಿಮಿಷ ನೀರಿನಲ್ಲಿ ನೆನೆಸಿಡಿ. ಬಳಿಕ ಪ್ರೆಷರ್ ಕುಕ್ಕರಿನಲ್ಲಿ ಸುಮಾರು ಐದಾರು ಸೀಟಿ ಬರುವವರೆಗೆ ಬೇಯಿಸಿ. 

2) ಬೆಂದ ಬೇಳೆಯನ್ನು ಕಡೆದು ತಣಿಯಲು ಬಿಡಿ

 3) ಮೂಲಂಗಿಯನ್ನು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಪ್ರೆಷರ್ ಕುಕ್ಕರಿನಲ್ಲಿ ಎರಡು ನಿಮಿಷಗಳವರೆಗೆ ಬೇಯಿಸಿ. 

4) ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಕೊತ್ತೊಂಬರಿ, ಕಡ್ಲೆಬೇಳೆ, ಒಣಮೆಣಸು ಮತ್ತು ಅಕ್ಕಿಹಿಟ್ಟುಗಳನ್ನು ಸೇರಿಸಿ ಹುರಿಯಿರಿ. ಕಡ್ಲೆಬೇಳೆ ಕೆಂಪಗಾದ ಬಳಿಕ ಕಾಯಿತುರಿ ಹಾಕಿ ಚೆನ್ನಾಗಿ ತಿರುವಿ. ಕಾಯಿತುರಿ ಸಹಾ ಕೊಂಚ ಕೆಂಪು ಬಣ್ಣಕ್ಕೆ ತಿರುಗಿದ ಬಳಿಕ ಇದನ್ನು ಕೆಳಗಿಳಿಸಿ ಕೊಂಚ ತಣಿದ ಬಳಿಕ ಮಿಕ್ಸಿಯಲ್ಲಿ ಕಡೆದು ಮಸಾಲೆ ತಯಾರಿಸಿ. 

5) ಇದೇ ಪಾತ್ರೆಯಲ್ಲಿ ಮತ್ತೊಮ್ಮೆ ಕೊಂಚ ಎಣ್ಣೆ ಹಾಕಿ ಸಾಸಿವೆ, ಮೆಂತೆ, ಹಿಂಗು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಕೊಂಚ ಹುರಿಯಿರಿ. 

6) ಸುಮಾರು ಒಂದು ನಿಮಿಷದ ಬಳಿಕ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಕೊಂಚ ಹುರಿಯಿರಿ. 

7) ಬಳಿಕ ಹುಣಸೆ ಹುಳಿಯ ನೀರು, ಅರಿಶಿನ ಪುಡಿ, ಉಪ್ಪು ಹಾಕಿ ಸುಮಾರು ಐದು ನಿಮಿಷ ಬೇಯಿಸಿ. ನೀರು ಇಂಗಿದರೆ ಕೊಂಚ ಸೇರಿಸಿ 

8) ಈಗ ಮೊದಲು ತಯಾರಿಸಿದ ಮಸಾಲೆ, ಬೇಯಿಸಿದ ಮೂಲಂಗಿ, ಬೇಳೆ ಸೇರಿಸಿ ಬೇಯಿಸುವುದನ್ನು ಮುಂದುವರೆಸಿ 

9) ನಿಮಗೆ ಸೂಕ್ತವೆನಿಸಿದಷ್ಟು ಗಾಢವಾಗಲು ಅಗತ್ಯವಿರುವ ನೀರು ಸೇರಿಸಿ. ಕೊಂಚ ಕಾಲ ಬೆಂದ ಬಳಿಕ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಲೆಯಿಂದ ಇಳಿಸಿ. 

ಸಲಹೆ 


1)ತೊಗರಿ ಬೇಳೆ ಬದಲಿಗೆ ಕಡ್ಲೆಬೇಳೆಯನ್ನೂ ಬಳಸಬಹುದು. ಆದರೆ ಉಪ್ಪು ಕೊಂಚ ಹೆಚ್ಚು ಅಗತ್ಯವಾಗಬಹುದು. 

2) ಒಣಮೆಣಸು ಕೊಂಚ ಖಾರ ಎನಿಸಿದರೆ ಒಂದು ಚಿಕ್ಕ ತುಂಡು ಬೆಲ್ಲವನ್ನೂ ಸೇರಿಸಬಹುದು.





Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್