ಅಪ್ಪಂದಿರ ದಿನ ವಿಶೇಷ: ಅಪ್ಪನಿಗಾಗಿ ಸ್ಪೆಷಲ್ ಚಿಕನ್ ರೆಸಿಪಿ!

ಅಪ್ಪಂದಿರ ದಿನಾಚರಣೆಯ ವಿಶೇಷವಾಗಿ ಈ ವರ್ಷ ನಿಮ್ಮ ತಂದೆಯವರಿಗೆ ಅವರ ಅಚ್ಚುಮೆಚ್ಚಿನ ಖಾದ್ಯವನ್ನೇಕೆ ತಯಾರಿಸಬಾರದು? ಹಿರಿಯರಿಗೆ ತಮ್ಮ ಸಂಪ್ರದಾಯದ ಅಡುಗೆಗಳು ಹೆಚ್ಚು ಇಷ್ಟವಾಗುತ್ತಿದ್ದರೂ ತಮ್ಮ ಸೊಸೆಗೆ ಕಷ್ಟವಾಗಬಾರದೆಂದು ಇವರು ಕೇಳಲಿಕ್ಕೇ ಹೋಗುವುದಿಲ್ಲ. ಇಂದಿನ ಸೊಸೆಯರಲ್ಲಿ ಹೆಚ್ಚಿನವರಿಗೆ ಈ ಸಾಂಪ್ರಾದಾಯಿಕ ಅಡುಗೆಗಳನ್ನು ತಯಾರಿಸುವ ಕಲೆಯೂ ತಿಳಿದಿಲ್ಲ.

 ಒಂದು ವೇಳೆ ನಿಮ್ಮ ತಂದೆಯವರಿಗೆ ದಕ್ಷಿಣ ಭಾರತೀಯ ಅಡುಗೆಗಳು ಇಷ್ಟವಿದ್ದು ನಿಮಗೆ ಈ ಅಡುಗೆ ಮಾಡಲು ಬರದೇ ಇದ್ದಲ್ಲಿ ಇಂದಿನ ಲೇಖನ ನಿಮ್ಮ ನೆರವಿಗೆ ಬರಲಿದೆ. ಹಳೆಯದು ಎಂದಾಕ್ಷಣ ಇದಕ್ಕಾಗಿ ದಿನವಿಡೀ ವ್ಯಯಿಸಬೇಕೆಂದೇನೂ ಇಲ್ಲ. ಬದಲಿಗೆ ಈ ರೆಸಿಪಿಯಲ್ಲಿ ಅತಿ ಕಡಿಮೆ ಸಾಮಾಗ್ರಿಗಳಿದ್ದು ಅಪ್ಪಟ ಸಾಂಪ್ರಾದಾಯಿಕ ರುಚಿಯನ್ನು ಹೊಂದಿದೆ. ವಿಶೇಷವಾಗಿ ಕರಿಬೇವಿನ ಒಗ್ಗರಣೆಯ ಪರಿಮಳ ಇದರಿಂದ ಪ್ರಮುಖವಾಗಿ ಹೊಮ್ಮುತ್ತಿದ್ದು ನಿಮ್ಮ ಹಿರಿಯರು ಖಂಡಿತಾ ಇಷ್ಟಪಡುತ್ತಾರೆ. ಅಲ್ಲದೇ ಸುಲಭವಾಗಿ ತಯಾರಿಸುವಂತಹದ್ದೂ ಆಗಿದೆ. ಬನ್ನಿ, ಈ ವರ್ಷದ ತಂದೆಯರ ದಿನವನ್ನು ಅವರ ನೆಚ್ಚಿನ ರುಚಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸೋಣ...

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು 

ಸಿದ್ಧತಾ ಸಮಯ: ಅರ್ಧ ಗಂಟೆ 

ತಯಾರಿಕಾ ಸಮಯ: ಅರ್ಧ ಗಂಟೆ ಅಗತ್ಯವಿರುವ

 ಸಾಮಾಗ್ರಿಗಳು:


 *ಕೋಳಿ ಮಾಂಸ - 1 ಕೇಜಿ (ಮಧ್ಯಮ ಗಾತ್ರದಲ್ಲಿ ತುಂಡರಿಸಿ.ದ್ದು)

 *ಈರುಳ್ಳಿ - 4 (ಚಿಕ್ಕದಾಗಿ ಹೆಚ್ಚಿದ್ದು)

 *ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ದೊಡ್ಡ ಚಮಚ

*ಹಸಿಮೆಣಸು - 3

 *ಉಪ್ಪು-ರುಚಿಗನುಸಾರ

 *ಅರಿಶಿನ ಪುಡಿ - 2 ಚಿಕ್ಕ ಚಮಚ 

*ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ 

*ಗರಂ ಮಸಾಲಾ ಪುಡಿ - 1 ಚಿಕ್ಕ ಚಮಚ 

*ಸಾಸಿವೆ - 1 ಚಿಕ್ಕ ಚಮಚ 

*ಒಣಮೆಣಸು - 2 

*ಕರಿಬೇವಿನ ಎಲೆಗಳು - 8 

*ಎಣ್ಣೆ - 3 ದೊಡ್ಡ ಚಮಚ


ವಿಧಾನ 


1. ಕೋಳಿಮಾಂಸದ ತುಂಡುಗಳನ್ನು ಚೆನ್ನಾಗಿ ತೊಳೆದ ಬಳಿಕ ಹರಿತವಾದ ಚಾಕುವಿನಿಂದ ಇದರ ಎಲ್ಲಾ ಬದಿಗಳಲ್ಲಿ ಚಿಕ್ಕ ಚಿಕ್ಕದಾದ ಗೆರೆಗಳಂತೆ ಹೆಚ್ಚು ಆಳವಿಲ್ಲದೇ ಗಾಯಗಳನ್ನು ಮಾಡಿ. 

2. ಒಂದು ಪಾತ್ರೆಯಲ್ಲಿ ಉಪ್ಪು, ಅರಿಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಈ ಮಾಂಸದ ತುಂಡುಗಳನ್ನು ಹಾಕಿ ಚೆನ್ನಾಗಿ ಕಲಕಿ ಮುಚ್ಚಳ ಮುಚ್ಚಿ ಒಂದು ಪಕ್ಕದಲ್ಲಿ ಸುಮಾರು ಮೂವತ್ತು ನಿಮಿಷಗಳವರೆಗೆ ಹಾಗೇ ಮುಚ್ಚಿಡಿ. 

3. ಬಳಿಕ ತಪ್ಪತಳದ ಬಾಣಲೆಯೊಂದರಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಸಿಡಿಸಿ, ಕರಿಬೇವಿನ ಎಲೆ, ಒಣಮೆಣಸು ಹಾಕಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ

 4. ಬಳಿಕ ನೀರುಳ್ಳಿ ಹಾಕಿ ಸುಮಾರು ನಾಲ್ಕೈದು ನಿಮಿಷಗಳ ಕಾಲ ನೀರುಳ್ಳಿ ಕೆಂಪಗಾಗುವಷ್ಟು ಮಧ್ಯಮ ಉರಿಯಲ್ಲಿ ಬಾಡಿಸಿ 

5. ಈಗ ಕೋಳಿ ಮಾಂಸದ ತುಂಡುಗಳನ್ನು ಹಾಕಿ ಐದಾರು ನಿಮಿಷಗಳ ಕಾಲ ನಡುನಡುವೆ ತಿರುವುತ್ತಾ ಬಾಡಿಸಿ

 6. ಬಳಿಕ ಅರಿಶಿನ ಪುಡಿ, ಉಪ್ಪು, ಕೆಂಪುಮೆಣಸಿನ ಪುಡಿ, ಹಸಿಮೆಣಸು, ಗರಂ ಮಸಾಲಾ ಪೌಡರ್ ಹಾಕಿ ಇನ್ನೂ ಸುಮಾರು ನಾಲ್ಕೈದು ನಿಮಿಷ ಬಾಡಿಸಿ 

7. ಈಗ ಉರಿಯನ್ನು ಕಡಿಮೆ ಮಾಡಿ ಒಂದು ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ ಹತ್ತು ನಿಮಿಷಗಳವರೆಗೆ ಕುದಿಸಿ.

 8. ಬಳಿಕ ಇದರ ಮೇಲೆ ಇನ್ನೂ ಕೊಂಚ ನೀರು ಚಿಮುಕಿಸುತ್ತಾ ನಡುನಡುವೆ ತಿರುವಿ ಮತ್ತೊಮ್ಮೆ ಮುಚ್ಚಳ ಮುಚ್ಚಿ

 9. ಚಿಕ್ಕ ಉರಿಯಲ್ಲಿಯೇ ಮುಂದಿನ ಹದಿನೈದು ನಿಮಿಷಗಳ ಕಾಲ ಮುಚ್ಚಳ ಮುಚ್ಚಿರುವಂತೆ ಕೋಳಿಮಾಂಸ ಬೇಯುವವರೆಗೂ ಹಬೆಯಲ್ಲಿ ಬೇಯಿಸಿ. 

10. ಬಳಿಕ ಉರಿ ಆರಿಸಿ ಬಿಸಿಬಿಸಿ ಇರುವಂತೆಯೇ ಬಡಿಸಿ. ಈ ವರ್ಷದ ಅಪ್ಪಂದಿರ ದಿನವನ್ನು ಈ ಸ್ವಾದಿಷ್ಟ ಖಾದ್ಯದೊಂದಿಗೆ ಚಪಾತಿ ಅಥವಾ ಅನ್ನದೊಂದಿಗೆ ಸೇವಿಸಲು ಅತ್ಯುತ್ತಮವಾಗಿದ್ದು ನಿಮ್ಮ ಹಿರಿಯರು ಖಂಡಿತಾ ಈ ರುಚಿಯನ್ನು ಮೆಚ್ಚುವರು.






Comments

Popular posts from this blog

ರುಚಿ ರುಚಿ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕಿ

ರುಚಿಕರವಾಗಿ ಗಿರಮಿಟ್ಟು ತಯಾರಿಸುವುದು ಹೇಗೆ?

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ