ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್

ಅನ್ನದಿಂದ ತಯಾರಿಸುವ ವಿವಿಧ ಬಾತ್, ಬಿಸಿಬೇಳೆ ಬಾತ್, ಖಿಚಡಿ ಮೊದಲಾದ ಖಾದ್ಯಗಳನ್ನೇ ಸೇವಿಸಿ ನಿಮಗೆ ಬೇಜಾರಾಗಿರಬಹುದು. ಈ ನಿಟ್ಟಿನಲ್ಲಿ ಹೊಸರುಚಿಯಾಗಿ ಪ್ರಸ್ತುತಪಡಿಸಲ್ಪಡುತ್ತಿರುವ ಕೊತ್ತಂಬರಿ ರೈಸ್ ಬಾತ್ ನಿಮ್ಮ ನಾಲಿಗೆಗೆ ವಿಶಿಷ್ಟವಾದ ರುಚಿಯನ್ನು ನೀಡಲಿದೆ. ಇದನ್ನು ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಸಿದ್ಧಪಡಿಸಬಹುದು. 

ಬೆಳಿಗೆ ಬೇಗನೇ ಉಪಾಹಾರ ಮುಗಿಸಿ ಆಫೀಸ್‌ಗೆ ಹೊರಡುವ ಧಾವಂತದಲ್ಲಿರುವ ಉದ್ಯೋಗಸ್ಥ ಮಹಿಳೆಯರಿಗಂತೂ ಈ ವಿಧಾನ ಅತ್ಯುಪಯುಕ್ತವಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನದ ಮತ್ತು ರಾತ್ರಿಯೂಟದಲ್ಲಿಯೂ ಪ್ರಮುಖ ಖಾದ್ಯವನ್ನಾಗಿ ಬಡಿಸಬಹುದು. ಇದರ ಉತ್ತಮ ಗುಣವೆಂದರೆ ಇದರಲ್ಲಿ ಬಳಸಲಾಗಿರುವ ಕೊತ್ತಂಬರಿ ಸೊಪ್ಪು.

 ಬೇರೆ ಖಾದ್ಯದಲ್ಲಿ ಸಿಕ್ಕ ಕೊತ್ತಂಬರಿ ಸೊಪ್ಪನ್ನು ಮಕ್ಕಳು ಕೆಳಗೆಸೆಯುವುದು ಕಂಡುಬಂದರೆ ಈ ಖಾದ್ಯದಲ್ಲಿ ಮಾತ್ರ ಕೊತ್ತಂಬರಿಯನ್ನು ಹೊಟ್ಟೆಗೆ ಕಳುಹಿಸುವುದನ್ನು ಗಮನಿಸುತ್ತೀರಿ. ಈ ಖಾದ್ಯವನ್ನು ತಯಾರಿಸಲೇಬೇಕೆಂಬ ಬಯಕೆ ಮೂಡಿತೇ? ಕೆಳಗಿನ ವಿಧಾನವನ್ನು ಗಮನಿಸಿ:
ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು

 ಸಿದ್ಧತಾ ಸಮಯ: ಹದಿನೈದು ನಿಮಿಷಗಳು

 ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

 ಅಗತ್ಯವಿರುವ ಸಾಮಾಗ್ರಿಗಳು:


 *ಅಕ್ಕಿ: ಅರ್ಧಕೇಜಿ (ಚೆನ್ನಾಗಿ ತೊಳೆದಿರಬೇಕು) 

*ಕೊತ್ತಂಬರಿ ಸೊಪ್ಪು: ಒಂದು ದೊಡ್ಡ ಕಟ್ಟು (ಚಿಕ್ಕದಾದರೆ ಎರಡು ಕಟ್ಟು)-ಕೇವಲ ಎಲೆಗಳನ್ನು ಆರಿಸಿ ದಂಟನ್ನು ನಿವಾರಿಸಿದ್ದು. 

*ಈರುಳ್ಳಿ: ಎರಡು (ಮಧ್ಯಮ ಗಾತ್ರ, ನಾಲ್ಕು ತುಂಡು ಮಾಡಿದ್ದು)

 *ಬೆಳ್ಳುಳ್ಳಿ: 4 ರಿಂದ 5 ಸಿಪ್ಪೆ ನಿವಾರಿಸಿ ಜಜ್ಜಿದ್ದು 

*ಹಸಿಮೆಣಸು: 4 ರಿಂದ 5

*ದಾಲ್ಚಿನ್ನಿ ಎಲೆ: 2

 *ಏಲಕ್ಕಿ: 2-3 

*ಚೆಕ್ಕ : ಸುಮಾರು ಒಂದಿಂಚಿನ ತುಂಡು

 *ಲವಂಗ : 2-3

 *ಸಾಸಿವೆ: 1 ದೊಡ್ಡ ಚಮಚ

 *ಬೇವಿನ ಎಲೆ : 5 ರಿಂದ 8 

*ಕಾಯಿ ತುರಿ: 1 ಚಿಕ್ಕ ಕಪ್ (ಅಥವಾ ಅರ್ಧ ಹೋಳಿನ ತುರಿ)

 *ಅಡುಗೆ ಎಣ್ಣೆ: 3 ದೊಡ್ಡ ಚಮಚ

 *ಉಪ್ಪು : ರುಚಿಗನುಸಾರ ಕೊತ್ತಂಬರಿ ಪುಡಿಯಲ್ಲಿರುವ ಪ್ರಯೋಜನಗಳು

ವಿಧಾನ: 

*) ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿ ಮತ್ತು ಸಾಕಷ್ಟು ನೀರು ಹಾಕಿ ಮೂರು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಕ್ಷಣ ಸೀಟಿಯನ್ನು ಸುರಿಯುವ ತಣ್ಣೀರಿನಡಿ ಇಟ್ಟು ತಣಿಸಿ ಒತ್ತಡ ಕಡಿಮೆಯಾದ ಬಳಿಕ ಮುಚ್ಚಳ ತೆರೆದು ಅಕ್ಕಿಯನ್ನು ಬೇರೆ ಪಾತ್ರೆಗೆ ವರ್ಗಾಯಿಸಿ. ಇದು ಸುಮಾರು ತೊಂಬತ್ತು ಶೇಖಡಾ ಬೆಂದಿರಬೇಕು.
 *) ಮಿಕ್ಸಿಯಲ್ಲಿ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಎಲೆಗಳು, ದಾಲ್ಚಿನ್ನಿ ಎಲೆ, ಏಲಕ್ಕಿ, ದಾಲ್ಚಿನ್ನಿ, ಕಾಯಿತುರಿ ಹಾಕಿ ಒಣಗಿರುವಂತೆಯೇ ಅರೆಯಿರಿ. ನೀರು ಸೇರಿಸಬೇಡಿ, ಒಣದಾಗಿಯೇ ಇರಲಿ. (ನೀರು ಸೇರಿಸಿದರೆ ರುಚಿ ಕೆಡುತ್ತದೆ) 

*) ಒಂದು ದಪ್ಪತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಬೇವಿನ ಎಲೆ ಹಾಕಿ ತಿರುವಿ.

 *) ಎರಡು ನಿಮಿಷದ ಬಳಿಕ ಅರೆದ ಮಸಾಲೆಯನ್ನು ಹಾಕಿ ತಿರುವುದನ್ನು ಮುಂದುವರೆಸಿ.

*) ಮಸಾಲೆ ಚೆನ್ನಾಗಿ ಬೆಂದ ಬಳಿಕ (ಮಸಾಲೆಯಿಂದ ಎಣ್ಣೆ ಹೊರಹರಿಯಲು ಪ್ರಾರಂಭವಾದ ಬಳಿಕ) ಬೇಯಿಸಿದ್ದ ಅಕ್ಕಿಯನ್ನು ಹಾಕಿ ತಿರುವಿ. ಉಪ್ಪು ಹಾಕಿ ಕೊಂಚ ಕಾಲ ತಿರುವುದನ್ನು ಮುಂದುವರೆಸಿ. ಬಳಿಕ ಸ್ಟವ್ ಆರಿಸಿ ಒಂದೆರಡು ನಿಮಿಷ ಮುಚ್ಚಳ ಮುಚ್ಚಿಡಿ.
 *) ಬಿಸಿಬಿಸಿ ಇದ್ದಂತೆಯೇ ಬಡಿಸಿ.

 ಸಲಹೆ: 

*) ಕೊತ್ತಂಬರಿ ಸೊಪ್ಪನ್ನು ತಿನ್ನದೇ ಕೆಳಗೆ ಎಸೆಯುವವರಿಗೆ ಈ ಖಾದ್ಯ ಹೇಳಿ ಮಾಡಿಸಿದ ಆಹಾರವಾಗಿದೆ. 

*) ಹೆಚ್ಚಿನ ರುಚಿಗೆ, ಕೊಂಚ ದಾಳಿಂಬೆ ಕಾಳುಗಳನ್ನು ಬಡಿಸುವ ಹೊತ್ತಿನಲ್ಲಿ ಮೇಲೆ ಸಿಂಪಡಿಸಬಹುದು 

*) ರಾತ್ರಿಯೂಟಕ್ಕೆ ಮೊಸರಿನೊಂದಿಗೂ ಸೇವಿಸಬಹುದು. 

*) ಒಂದು ವೇಳೆ ಹೆಚ್ಚಿನ ಪ್ರಮಾಣ ಉಳಿದರೆ ಸಂಜೆ ಅಥವಾ ಮುಂದಿನ ಹೊತ್ತಿಗೆ ಸೇವಿಸುವುದಾದರೆ ಕೊಂಚವೇ ಎಣ್ಣೆಯೊಂದಿಗೆ ಬಿಸಿಮಾಡಿ ಸ್ವಲ್ಪ ಖಾರ ಶ್ಯಾವಿಗೆ (ಅಥವಾ ಖಾರಾ ಸೇವು) ಸೇರಿಸಿ ತಿಂದರೆ ಗರಿಗರಿಯಾದ ರುಚಿ ಸಿಗುತ್ತದೆ.

*) ದೊಡ್ಡಗಾತ್ರದ ಶೇಂಗಾಬೀಜಗಳನ್ನು ಬಳಸುವುದಾದರೆ ಎಣ್ಣೆಯನ್ನು ಬಿಸಿಮಾಡಿ ಸಾಸಿವೆ ಸಿಡಿಸುವ ಮೊದಲು ಹಾಕಿ ಕೊಂಚ ಕೆಂಪಗಾದ ಬಳಿಕ ಸಾಸಿವೆ ಸಿಡಿಸಿ. ಈ ವಿಧಾನವನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.





Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್