ಯಮ್ಮೀ ಎನಿಸುವ 'ಗೋಡಂಬಿ ಚಿಕನ್ ಫ್ರೈಡ್ ರೈಸ್'!

ಇಂದು ಅಮೃತಾ ಬೆಳಗ್ಗೆ ಲಗುಬಗೆಯಿಂದ ಎದ್ದಳು. ಈ ದಿನ ಅಮೃತಾಳಿಗೆ ಅತ್ಯಂತ ಸಂತೋಷದ ದಿನ. ಮೊದಲ ಬಾರಿ " ಕಿಟಿ ಪಾರ್ಟಿ"ಗಾಗಿ ಗೆಳತಿಯರನ್ನು ಮನೆಗೆ ಆಹ್ವಾನಿಸಿದ್ದಳು. ತನ್ನದೇ ಸಾಮ್ಯಾಜ್ಯ. ತಾನೇ ನಿಶ್ಚಯಿಸುವ ಅಡುಗೆ! ತಾನು ಮಾಡುವ ಅಡುಗೆ ಎಂದ ಮೇಲೆ, ಏನಾದರೂ ಸ್ಪೆಷಲ್ ಇರಲೇ ಬೇಕು. ಏನು ಮಾಡಲಿ....ಎಂದು ಯೋಚಿಸಿದಾಗ ಥಟ್ಟನೆ ಹೊಳೆದದ್ದು... "ಕ್ಯಾಷ್ಯೂ ಚಿಕನ್ ಫ್ರೈಡ್ ರೈಸ್"! (ಗೋಡಂಬಿ ಹಾಕಿ ಮಾಡಿದ ಚಿಕನ್ ಫ್ರೈಡ್ ರೈಸ್)

ಇದನ್ನು ಎಲ್ಲರೂ ಇಷ್ಟ ಪಡುತ್ತಾರೆ ಎಂಬ ಭರವಸೆಯ ಮುಗುಳ್ನಗೆ ಯೊಂದಿಗೆ ಅಮೃತಾ ಅಡುಗೆ ಮನೆ ಕಡೆಗೆ ಜಿಗಿಯುವ ಹೆಜ್ಜೆ ಇರಿಸಿದಳು! ಹೌದು. ಚೈನೀಸ್ ರೆಸಿಪಿ ಇದೀಗ ಯುವ ಜನತೆಯಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಅದರಲ್ಲೂ ಮಾಲ್‌ಗಳ ಫುಡ್ ಕೋರ್ಟ್‌ಗಳಲ್ಲಿ, ಗಲ್ಲಿಗಳ ಮೂಲೆಯ ಅರೆಕತ್ತಲ ರೆಸ್ಟೋರೆಂಟ್ ಗಳಲ್ಲಿ ಯುವಕ ಯುವತಿಯರು ಮೆಲ್ಲ ಬಯಸುವುದೇ ನೂಡಲ್ಸ್, ಪಿಜ್ಜಾ, ಮಂಚೂರಿ, ಚೈನೀಸ್ ಚಿಕನ್...! ಸುಲಭದಲ್ಲಿಯೆ ರೆಡಿ ಚೈನೀಸ್ ಫ್ರೈಡ್ ರೈಸ್

ಕ್ಯಾಷ್ಯೂ ಚಿಕನ್ ಫ್ರೈಡ್ ರೈಸ್ ಹೆಸರಿಗೆ ತಕ್ಕಂತೆ ರುಚಿಯೂ ಗಡದ್ದಾಗಿರುತ್ತದೆ, ಹಾಗಂತ ತಯಾರಿಸುವುದು ಸರಳವೇ... ಮುಂದೆ ಓದಿ...

ಏನೇನು ಬೇಕು?


*ಚಿಕನ್ ತುಂಡು- 2 ಕಪ್ (ಘನಾಕೃತಿಯಲ್ಲಿ ಕಟ್ಟ ಮಾಡಿರುವ)

*ಎಣ್ಣೆ - 5 ಟೇಬಲ್ ಸ್ಪೂನ್

*ಅಕ್ಕಿ- 2.5 ಕಪ್

*ಗೇರು ಬೀಜ - 1 ಕಪ್

*ಕೆಂಪು ದೊಣ್ಣೆ ಮೆಣಸು- 1 ಕಪ್ (ಚೌಕವಾಗಿಕತ್ತರಿಸಿದ)

*ಅನಾನಸು- 1½ ಕಪ್ (ಚೌಕವಾಗಿಕತ್ತರಿಸಿದ)

*ಎಳೆ ಈರುಳ್ಳಿ - 1 ಕಪ್ (ನುಣ್ಣಗೆ ಕತ್ತರಿಸಿದ)

*ಮೊಟ್ಟೆ - 2

*ಸೋಯಾ ಸಾಸ್....2 ಟೇಬಲ್ ಚಮಚ

*ವೈಟ್ ಕರಿಮೆಣಸು - 1 ಟೀ ಚಮಚ

*ಹಸಿ ಬಟಾಣಿ ಕಾಳು..½ ಕಪ್

*ಶುಂಠಿ- 1 ಟೇಬಲ್ ಚಮಚ (ಸಣ್ಣದಾಗಿ ಕೊಚ್ಚಿದ)

*ಬೆಳ್ಳುಳ್ಳಿ-1 ಟೇಬಲ್ ಚಮಚ (ಸಣ್ಣದಾಗಿ ಕೊಚ್ಚಿದ)

*ಲಿಂಬೆ ರಸ - ಟೇಬಲ್ ಚಮಚ

*ಕೊತ್ತಂಬರಿ ಸೊಪ್ಪು - ¼th ಕಪ್ (ಸಣ್ಣದಾಗಿ ಕೊಚ್ಚಿದ)

*ಉಪ್ಪು-ಸಕ್ಕರೆ ರುಚಿಗೆ ತಕಂತೆ

ನಾಲ್ಕು ಜನರಿಗೆ ಧಾರಾಳ ಬಡಿಸಬಹುದಾದ ಅಳತೆ ಇದು. ಇದರ ತಯಾರಿಕೆಗೆ 20 ನಿಮಿಷ, ಮತ್ತು ಬೇಯಿಸುವುದಕ್ಕೆ 25 ನಿಮಿಷಗಳು ಬೇಕಾಗುವುದು.


ತಯಾರಿಸುವ ವಿಧಾನ 


1. ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಚಿಕನ್ ತುಂಡುಗಳನ್ನು ಹಾಕಿ. ಅದಕ್ಕೆ ಸೋಯಾ ಸಾಸ್ ಸುರಿಯಿರಿ. ಕರಿಮೆಣಸು ಹಾಕಿ ಚೆನ್ನಾಗಿ ತಿರುವಿ, ಫ್ರಿಜ್‌ನಲ್ಲಿ ಇರಿಸಿ. 

2. ಬಾಣಲೆ/ಪ್ಯಾನ್ ನಲ್ಲಿ 1 ಟೇಬಲ್ ಚಮಚ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅನಂತರ ಚಿಕನ್ ತುಂಡುಗಳನ್ನು ಹಾಕಿ. ಅದು ಗುಲಾಬಿ ಬಣ್ಣಕ್ಕೆ ತಿರುಗುವ ವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ, ಬೆಂದಾಗ ಅದನ್ನು ಪಕ್ಕಕ್ಕೆ ತೆಗೆದಿರಿಸಿ. 

3. ಈಗ, ಅದೇ ಬಾಣಲೆಗೆ 1 ಟೇಬಲ್ ಚಮಚ ಎಣ್ಣೆ ಹಾಕಿ, ಅದು ಕಾದಾಗ ಅದಕ್ಕೆ ಮೊಟ್ಟೆ ಸುರಿದು ಕದಡಿ. ಬೆಂದಾಗ, ಬೇರೆ ಬೌಲ್ನಲ್ಲಿ ತೆಗೆದಿರಿಸಿ. 

4. ಮತ್ತೆ ಬಾಣಾಲೆಗೆ 1 ಟೇಬಲ್ ಚಮಚ ಎಣ್ಣೆ ಸೇರಿಸಿ, ತೆಳ್ಳಗೆ ಬಿಲ್ಲೆಗಳಾಗಿ ಕತ್ತರಿಸಿದ ಅನಾನಸ್, ಕೆಂಪು ದೊಣ್ಣೆ ಮೆಣಸು ಬಿಲ್ಲೆಗಳನ್ನೂ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಸಣ್ಣಗೆ ಕತ್ತರಿಸಿದ ಎಳೆ ಈರುಳ್ಳಿ, ಹಸಿ ಬಟಾಣಿ ಕಾಳು, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿಗಳನ್ನು ಹಾಕಿ ಗ್ಯಾಸ್ ಒಲೆಯ ಮೇಲಿಟ್ಟು, ಚೆನ್ನಾಗಿ ಬಾಡಿಸಿ. 

5. ಈಗ ಬಾಣಲೆಯ ವಸ್ತುಗಳನ್ನು ಮೊಟ್ಟೆ ತೆಗೆದಿರಿಸಿದ ಬೌಲ್‌ಗೆ ಸುರಿಯಿರಿ.

 6. ಬಾಣಲೆಗೆ ಮತ್ತೆ 2 ಟೇಬಲ್ ಚಮಚ ಎಣ್ಣೆ ಸುರಿದು, ಗೇರು ಬೀಜ ಹಾಕಿ, ಚಿನ್ನದ ರಂಗು ಬರುವಂತೆ ಕರಿಯಿರಿ. 

7. ಗೇರು ಗಮ್ಮೆಂದಾಗ, ಅದೇ ಬಾಣಲೆಗೆ ಬೆಂದ ಅನ್ನವನ್ನು ಹಾಕಿ ಚೆನ್ನಾಗಿ ಕದಡಿ. 

8. ಈಗ ಅದಕ್ಕೆ ಮೊಟ್ಟೆಯ ಬೌಲ್‌ನಲ್ಲಿದ್ದ ಎಲ್ಲ ವಸ್ತುಗಳನ್ನೂ ಹಾಕಿ ಚೆನ್ನಾಗಿ ಬೆರೆಸಿ. ಮೇಲಿಂದ ಉಪ್ಪು,ಬೇಕಿದ್ದರೆ ಚಿಟಕಿ ಸಕ್ಕರೆ ಸುತ್ತಲೂ ಉದುರಿಸಿ, ಚೆನ್ನಾಗಿ ಬೆರೆಸಿ. ತಳ ಹಿಡಿಯದಂತೆ ಚಿಕ್ಕ ಉರಿಯಲ್ಲಿ ಗೊಟಾಯಿಸುತ್ತಿರಬೇಕು.

 9. ಈಗ ಚಿಕನ್ ಕಾಕಿ ಕದಡಿ. 

10. ಚೆನ್ನಾಗಿ ಬೆರೆಸಿ, ಮೇಲೆ ಸೋಯಾ ಸಾಸ್, ಮತ್ತು ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ, ಲಿಂಬೆ ರಸ ಬೆರೆಸಬೇಕು.


 


Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್