ಅವರೆ ಕಾಳಿನ ಕುರ್ಮಾ...!!
ಅವರೆಕಾಳು - 11/2 ಕಪ್
ಈರುಳ್ಳಿ - 2
ಟೊಮೆಟೋ - 2
ಹಸಿಮೆಣಸು - 2
ಲವಂಗ - 2-3
ಚೆಕ್ಕೆ - 1 ಇಂಚು
ಏಲಕ್ಕಿ - 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಅರಿಶಿಣ - 1 ಚಮಚ
ಅಚ್ಚಖಾರದ ಪುಡಿ - 2 ಚಮಚ
ಉಪ್ಪು - ರುಚಿಗೆ
ಎಣ್ಣೆ - 3-4 ಚಮಚ
ಗಸಗಸೆ - 1 ಚಮಚ
ನೆನೆಸಿದ ಬಾದಾಮಿ - 5-6
ಸೋಂಪು - 1/2 ಚಮಚ
ಗೋಡಂಬಿ - 5-6
ಕಾಯಿತುರಿ - 3-4 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಾಡುವ ವಿಧಾನ:
ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಟೊಮೆಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹಸಿಮೆಣಸನ್ನು ಸಿಗಿದಿಟ್ಟುಕೊಳ್ಳಿ. ಅವರೆಕಾಳನ್ನು ಬಿಡಿಕೊಂಡು ಕುಕ್ಕರ್‌ನಲ್ಲಿ ಹಾಕಿ ಅದಕ್ಕೆ 1/2 ಕಪ್ ನೀರು ಮತ್ತು ಸ್ವಲ್ಪ ಉಪ್ಪನ್ನು ಹಾಕಿ 1-2 ಸೀಟಿಯನ್ನು ಹಾಕಿಸಿ.
ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಅದಕ್ಕೆ ಲವಂಗ, ಚೆಕ್ಕೆ ಮತ್ತು ಸ್ವಲ್ಪ ಜಜ್ಜಿದ ಎರಡು ಏಲಕ್ಕಿಯನ್ನು ಹಾಕಿ ಹುರಿಯಿರಿ. ಅದಕ್ಕೆ ಈರುಳ್ಳಿಯನ್ನು ಹಾಕಿ ಸ್ವಲ್ಪ ಸಮಯ ಹುರಿಯಿರಿ ನಂತರ ಸಿಗಿದ 2 ಹಸಿಮೆಣಸನ್ನು ಹಾಕಿ ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ಬಂದಾಗ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೋವನ್ನು ಹಾಕಿ 2 ನಿಮಿಷ ಹುರಿಯಿರಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅರಿಶಿಣ, 2 ಚಮಚ ಅಚ್ಚಖಾರದ ಪುಡಿಯನ್ನು ಹಾಕಿ ಟೊಮೆಟೋ ಬೆಂದು ಕರಗುವವರೆಗೆ ಹುರಿದು ನಂತರ ಈ ಮೊದಲೇ ಬೇಯಿಸಿಕೊಂಡ ಅವರೆಕಾಳನ್ನು ನೀರಿನ ಸಮೇತ ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚಿಕ್ಕ ಉರಿಯಲ್ಲಿ 5-6 ನಿಮಿಷ ಮುಚ್ಚಿ ಬೇಯಿಸಿ.
ಈಗ ಮಿಕ್ಸಿ ಜಾರ್‌ಗೆ ಗಸಗಸೆ, ಗೋಡಂಬಿ, ಬಾದಾಮಿ, ಸೋಂಪು, ಕಾಯಿತುರಿ ಮತ್ತು ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಸ್ಟೌ ಮೇಲೆ ಕುದಿಯುತ್ತಿರುವ ಮಸಾಲೆಗೆ ಸೇರಿಸಿ ಅದಕ್ಕೆ ಅಗತ್ಯವಿರುವಷ್ಟು ನೀರನ್ನು ಹಾಕಿ 10-15 ನಿಮಿಷ ಕುದಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡರೆ ಅವರೆ ಕಾಳಿನ ಕುರ್ಮಾ ರೆಡಿಯಾಗುತ್ತದೆ. ಇದು ಪೂರಿ, ಚಪಾತಿ, ರೊಟ್ಟಿ ಮತ್ತು ಅನ್ನದ ಜೊತೆಯೂ ರುಚಿಯಾಗಿರುತ್ತದೆ. ನೀವೂ ಒಮ್ಮೆ ಮಾಡಿ ಸವಿಯಿರಿ.
Comments
Post a Comment