ಅವರೆ ಕಾಳಿನ ಕುರ್ಮಾ...!!
ಅವರೆಕಾಳಿನ ಉಪ್ಪಿಟ್ಟು, ಸಾಂಬಾರು, ಪಲ್ಯ ಮಾಡುತ್ತಿರುತ್ತೀರಿ. ಹಾಗೆಯೇ ಒಮ್ಮೆ ಅವರೆ ಕಾಳಿನ ಕುರ್ಮಾ ಸಹ ಮಾಡಿ ನೋಡಿ. ಇದು ಪೂರಿ, ಚಪಾತಿ, ರೊಟ್ಟಿ ಮತ್ತು ಅನ್ನದ ಜೊತೆಯಲ್ಲಿಯೂ ರುಚಿಯಾಗಿರುತ್ತದೆ. ಅವರೆ ಕಾಳಿನಲ್ಲಿ ಉತ್ತಮ ಪೌಷ್ಟಿಕಾಂಶಗಳಿದ್ದು ಆರೋಗ್ಯಕ್ಕೂ ಉತ್ತಮವಾದುದಾಗಿದೆ. ನಿಮಗೂ ಅವರೆ ಕಾಳಿನ ಕುರ್ಮಾ ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಬೇಕಾದಲ್ಲಿ ಈ ಲೇಖನವನ್ನು ಓದಿ.
ಬೇಕಾಗುವ ಸಾಮಗ್ರಿಗಳು:
ಅವರೆಕಾಳು - 11/2 ಕಪ್
ಈರುಳ್ಳಿ - 2
ಟೊಮೆಟೋ - 2
ಹಸಿಮೆಣಸು - 2
ಲವಂಗ - 2-3
ಚೆಕ್ಕೆ - 1 ಇಂಚು
ಏಲಕ್ಕಿ - 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಅರಿಶಿಣ - 1 ಚಮಚ
ಅಚ್ಚಖಾರದ ಪುಡಿ - 2 ಚಮಚ
ಉಪ್ಪು - ರುಚಿಗೆ
ಎಣ್ಣೆ - 3-4 ಚಮಚ
ಗಸಗಸೆ - 1 ಚಮಚ
ನೆನೆಸಿದ ಬಾದಾಮಿ - 5-6
ಸೋಂಪು - 1/2 ಚಮಚ
ಗೋಡಂಬಿ - 5-6
ಕಾಯಿತುರಿ - 3-4 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಾಡುವ ವಿಧಾನ:
ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಟೊಮೆಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹಸಿಮೆಣಸನ್ನು ಸಿಗಿದಿಟ್ಟುಕೊಳ್ಳಿ. ಅವರೆಕಾಳನ್ನು ಬಿಡಿಕೊಂಡು ಕುಕ್ಕರ್‌ನಲ್ಲಿ ಹಾಕಿ ಅದಕ್ಕೆ 1/2 ಕಪ್ ನೀರು ಮತ್ತು ಸ್ವಲ್ಪ ಉಪ್ಪನ್ನು ಹಾಕಿ 1-2 ಸೀಟಿಯನ್ನು ಹಾಕಿಸಿ.
ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಅದಕ್ಕೆ ಲವಂಗ, ಚೆಕ್ಕೆ ಮತ್ತು ಸ್ವಲ್ಪ ಜಜ್ಜಿದ ಎರಡು ಏಲಕ್ಕಿಯನ್ನು ಹಾಕಿ ಹುರಿಯಿರಿ. ಅದಕ್ಕೆ ಈರುಳ್ಳಿಯನ್ನು ಹಾಕಿ ಸ್ವಲ್ಪ ಸಮಯ ಹುರಿಯಿರಿ ನಂತರ ಸಿಗಿದ 2 ಹಸಿಮೆಣಸನ್ನು ಹಾಕಿ ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ಬಂದಾಗ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೋವನ್ನು ಹಾಕಿ 2 ನಿಮಿಷ ಹುರಿಯಿರಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅರಿಶಿಣ, 2 ಚಮಚ ಅಚ್ಚಖಾರದ ಪುಡಿಯನ್ನು ಹಾಕಿ ಟೊಮೆಟೋ ಬೆಂದು ಕರಗುವವರೆಗೆ ಹುರಿದು ನಂತರ ಈ ಮೊದಲೇ ಬೇಯಿಸಿಕೊಂಡ ಅವರೆಕಾಳನ್ನು ನೀರಿನ ಸಮೇತ ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚಿಕ್ಕ ಉರಿಯಲ್ಲಿ 5-6 ನಿಮಿಷ ಮುಚ್ಚಿ ಬೇಯಿಸಿ.
ಈಗ ಮಿಕ್ಸಿ ಜಾರ್‌ಗೆ ಗಸಗಸೆ, ಗೋಡಂಬಿ, ಬಾದಾಮಿ, ಸೋಂಪು, ಕಾಯಿತುರಿ ಮತ್ತು ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಸ್ಟೌ ಮೇಲೆ ಕುದಿಯುತ್ತಿರುವ ಮಸಾಲೆಗೆ ಸೇರಿಸಿ ಅದಕ್ಕೆ ಅಗತ್ಯವಿರುವಷ್ಟು ನೀರನ್ನು ಹಾಕಿ 10-15 ನಿಮಿಷ ಕುದಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡರೆ ಅವರೆ ಕಾಳಿನ ಕುರ್ಮಾ ರೆಡಿಯಾಗುತ್ತದೆ. ಇದು ಪೂರಿ, ಚಪಾತಿ, ರೊಟ್ಟಿ ಮತ್ತು ಅನ್ನದ ಜೊತೆಯೂ ರುಚಿಯಾಗಿರುತ್ತದೆ. ನೀವೂ ಒಮ್ಮೆ ಮಾಡಿ ಸವಿಯಿರಿ.
Comments
Post a Comment