ಕಡಲೆಬೇಳೆ ಹೋಳಿಗೆ

ಹೋಳಿಗೆಯು ಮಹಾರಾಷ್ಟ್ರದ ಸಿಹಿತಿಂಡಿಗಳಲ್ಲಿ ತುಂಬಾ ಪ್ರಸಿದ್ಧಿ ಪಡೆದಿರುವ ತಿನಿಸಾಗಿದೆ. ಕರ್ನಾಟಕವೂ ಅದಕ್ಕೆ ಹೊರತಾಗಿಲ್ಲ. ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಹೋಳಿಗೆಯನ್ನು ಮಾಡಿ ಸವಿಯುತ್ತಾರೆ. ಇದು ಬೇಗ ಕೆಡುವುದಿಲ್ಲ. ಮತ್ತು ತಯಾರಿಸುವುದೂ ಸಹ ಸುಲಭವಾಗಿದೆ. ಹಾಗಾದರೆ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ..
ತಯಾರಿಸಲು ಬೇಕಾಗುವ ಸಾಮಗ್ರಿಗಳು:

* ಕಡಲೆಬೇಳೆ 1 ಕಪ್

* ಬೆಲ್ಲ 3/4 ಕಪ್

* ಎಣ್ಣೆ 1 ಚಮಚ

* ಅರಿಶಿನ 1 ಚಮಚ

* ಏಲಕ್ಕಿ ಪುಡಿ /2 ಚಮಚ

* ಮೈದಾ ಹಿಟ್ಟು 1 ಕಪ್

* ಚಿರೋಟಿ ರವೆ 1/4 ಕಪ್

* ತುಪ್ಪ 5 ಚಮಚ

* ಬೇಯಿಸಲು ತುಪ್ಪ/ಎಣ್ಣೆ

* ಅಕ್ಕಿ ಹಿಟ್ಟು ಸ್ವಲ್ಪ

ಉಪ್ಪು ಸ್ವಲ್ಪ

ಮೊದಲು ಕಣಕ ತಯಾರಿಸಿಕೊಳ್ಳುವುದು ಹೇಗೆ ಎಂದು ನೋಡೋಣ

ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಉಪ್ಪು, ಅರ್ಧ ಚಮಚ ಅರಿಶಿನವನ್ನು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಬೇಕು. ಈ ಮಿಶ3ಣಕ್ಕೆ 4 ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಬೇಕು. ಎಷ್ಟು ಚೆನ್ನಾಗಿ ನಾದಿಕೊಳ್ಳುತ್ತೀರೋ ಅಷ್ಟು ಚೆನ್ನಾಗಿ ಹೋಳಿಗೆ ಮಾಡಬಹುದು. ನಂತರ ಒಂದು ಚಮಚ ತುಪ್ಪವನ್ನು ಅದರ ಮೇಲೆ ಹಾಕಿ ಒಂದು ಗಂಟೆ ಒದ್ದೆ ಬಟ್ಟೆಯಿಂದ ಮುಚ್ಚಬೇಕು. ನಂತರ ಒದ್ದೆ ಬಟ್ಟೆಯನ್ನು ತೆಗೆದು ಹಿಟ್ಟನ್ನು ಚೆನ್ನಾಗಿ ನಾದಬೇಕು.

  ಮೊದಲು ಕಡಲೆಬೇಳೆಯನ್ನು 3 ರಿಂದ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ 1 ಕಪ್ ನೀರನ್ನು ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. 5 ವಿಶಲ್ ಆದ ನಂತರ ಕುಕ್ಕರ್ ಅನ್ನು ಆರಿಸಬೇಕು. ನಂತರ ಬೆಂದ ಕಡಲೆಬೇಳೆಯಲ್ಲಿರುವ ನೀರನ್ನು ಸೋಸಿಕೊಳ್ಳಬೇಕು. ಬೇಳೆಯನ್ನು ಮಿಕ್ಸಿಯಲ್ಲಿ ಅಥವಾ ಗ್ರೈಂಡರಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಬೆಲ್ಲವನ್ನು ಹಾಕಿ ಅದಕ್ಕೆ ಕಾಲು ಕಪ್ ನೀರನ್ನು ಹಾಕಿ ಕುದಿಸಬೇಕು. ಬೆಲ್ಲವು ಪೂರ್ತಿಯಾಗಿ ಕರಗಿದ ನಂತರ ಸೋಸಿಕೊಳ್ಳಬೇಕು.

ನಂತರ ಆ ಬೆಲ್ಲವು ಪಾಕ ಬರುವ ತನಕ ಚೆನ್ನಾಗಿ ಕುದಿಸಬೇಕು. ಈ ಪಾಕಕ್ಕೆ ರುಬ್ಬಿದ ಬೇಳೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಉಂಡೆಯ ಗಾತ್ರದ ಕಣಕವನ್ನು ತೆಗೆದುಕೊಳ್ಳಬೇಕು. ಕಣಕವನ್ನು ಚಪ್ಪಟೆಯನ್ನಾಗಿ ಮಾಡಿ ಹೂರಣವನ್ನು ಅದರ ಮಧ್ಯದಲ್ಲಿಡಬೇಕು. ಹೂರಣವನ್ನು ಕಣಕದಿಂದ ಸುತ್ತಲೂ ಮುಚ್ಚಬೇಕು.

ನಂತರ ಅಕ್ಕಿಹಿಟ್ಟನ್ನು ಉದುರಿಸಿಕೊಂಡು ಕಟ್ಟಿಕೊಂಡ ಉಂಡೆಗಳನ್ನುನಿಧಾನವಾಗಿ ಲಟ್ಟಿಸಿಕೊಳ್ಳಬೇಕು. ಎಷ್ಟು ತೆಳುವಾಗಿ ಲಟ್ಟಿಸುತ್ತೀರೋ ಅಷ್ಟು ಚೆನ್ನಾಗಿರುತ್ತದೆ ಹೋಳಿಗೆ. ನಂತರ ತವವನ್ನು ಮಧ್ಯಮ ಉರಿಯಲ್ಲಿ ಇಟ್ಟು ಬಿಸಿಯಾದ ನಂತರ ತುಪ್ಪವನ್ನು ಹರಡಬೇಕು. ಲಟ್ಟಿಸಿಕೊಂಡ ಹೋಳಿಗೆಯನ್ನು ತವದಲ್ಲಿ ಹಾಕಿ ನಂತರ ಮತ್ತೊಂದು ಬದಿಯಲ್ಲಿಯೂ ಸಹ ತುಪ್ಪವನ್ನು ಹಾಕಿ ಬೇಯಿಸಿದರೆ ರುಚಿಯಾದ ಕಡಲೆಬೇಳೆ ಹೋಳಿಗೆಯು ಸವಿಯಲು ಸಿದ್ಧ.   

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್