ಬೆಂಗಾಲಿ ಶೈಲಿಯಲ್ಲಿ ವೆಜ್ ಚಾಪ್ ಮಾಡಿ ಸವಿಯಿರಿ...

ವೆಜ್ ಚಾಪ್ ಕೊಲ್ಕತ್ತಾದ ವಿಶಿಷ್ಟ ಮತ್ತು ಸಾಂಪ್ರದಾಯಿಕ ತಿಂಡಿಯಾಗಿದೆ. ಇದನ್ನು ಹಲವು ತರಕಾರಿಗಳನ್ನು ಸೇರಿಸಿ, ಪ್ರತ್ಯೇಕವಾಗಿ ಬಿಟ್ರೂಟ್ ಸೇರಿಸಿ ಮಾಡಲಾಗುತ್ತದೆ. ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಆರೋಗ್ಯಕ್ಕೂ ಉತ್ತಮವಾದುದೇ ಆಗಿದೆ. ಇದನ್ನು ಮಾಡುವ ವಿಧಾನ ಹೆಚ್ಚಾಗಿ ವೆಜಿಟೇಬಲ್ ಕಟ್ಲೆಟ್ ಅನ್ನು ನೆನಪಿಗೆ ತರುತ್ತದೆಯಾದರೂ ಇದರಲ್ಲಿ ಬಳಸುವ ಸಾಮಗ್ರಿಗಳು ವಿಶಿಷ್ಟವಾಗಿವೆ.

ಬೇಕಾಗುವ ಸಾಮಗ್ರಿಗಳು:

ಬಟಾಟೆ - 1
ಬೀಟ್ರೂಟ್ - 1
ಕ್ಯಾರೆಟ್ - 1
ಜೀರಿಗೆ - 1 ಚಮಚ
ದನಿಯಾ - 1 ಚಮಚ
ಸೋಂಪು - 1 ಚಮಚ
ಮೆಣಸಿನಕಾಳು - 4-5
ಲವಂಗದ ಎಲೆ - 1 ಚೂರು
ಲವಂಗ - 2
ಏಲಕ್ಕಿ - 1
ಚೆಕ್ಕೆ - 1 ಚೂರು
ಕೆಂಪು ಮೆಣಸು - 1
ಶುಂಠಿ ಪೇಸ್ಟ್ - 1 ಚಮಚ
ಹಸಿಮೆಣಸು - 1
ಸಕ್ಕರೆ - 1 ಚಮಚ
ಶೇಂಗಾ - 1/4 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮೈದಾ ಹಿಟ್ಟು - 3-4 ಚಮಚ
ಜೋಳದ ಹಿಟ್ಟು - 3-4 ಚಮಚ
ಬ್ರೆಡ್ ತರಿ - ಸ್ವಲ್ಪ
ಉಪ್ಪು - ರುಚಿಗೆ
ಎಣ್ಣೆ - ಕರಿಯಲು

ಮಾಡುವ ವಿಧಾನ:

ಬಟಾಟೆ, ಬೀಟ್ರೂಟ್ ಮತ್ತು ಕ್ಯಾರೆಟ್ ಸಿಪ್ಪೆಯನ್ನು ತೆಗೆದು ಕಟ್ ಮಾಡಿ ಸ್ವಲ್ಪ ಉಪ್ಪನ್ನು ಹಾಕಿ ಉಗಿಯಲ್ಲಿ ಬೇಯಿಸಿ. ನಂತರ ಅದನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಟ್ಟುಕೊಳ್ಳಿ. ನಂತರ ಒಂದು ಪ್ಯಾನ್‌ನಲ್ಲಿ ಜೀರಿಗೆ, ದನಿಯಾ ಸೋಂಪು, ಮೆಣಸಿನಕಾಳು, ಲವಂಗದ ಎಲೆ, ಲವಂಗ, ಏಲಕ್ಕಿ, ಚೆಕ್ಕೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿದ ಪರಿಮಳ ಬರುವವರೆಗೆ ಹುರಿದು ಅದನ್ನು ತರಿತರಿಯಾಗಿ ಪುಡಿಮಾಡಿಕೊಳ್ಳಿ. ಈಗ ಅದೇ ಪ್ಯಾನ್‍ಗೆ 2 ಚಮಚ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿಯಾದಾಗ 1 ಚಮಚ ಶುಂಠಿ ಪೇಸ್ಟ್ ಮತ್ತು ಹೆಚ್ಚಿದ ಹಸಿಮೆಣಸನ್ನು ಹಾಕಿ ಹುರಿಯಿರಿ. ನಂತರ ಈಗಾಗಲೇ ಸ್ಮ್ಯಾಶ್ ಮಾಡಿಟ್ಟುಕೊಂಡಿರುವ ತರಕಾರಿಯನ್ನು ಸೇರಿಸಿ 2-3 ನಿಮಿಷ ಹುರಿಯಿರಿ. ಅದಕ್ಕೆ ಈ ಮೊದಲು ಪುಡಿ ಮಾಡಿಟ್ಟಿರುವ ಮಸಾಲೆ, 1 ಚಮಚ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ ಅದರಲ್ಲಿ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಶೇಂಗಾವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.

ಈಗ ಇನ್ನೊಂದು ಚಿಕ್ಕ ಬೌಲ್‌ನಲ್ಲಿ 3-4 ಚಮಚ ಜೋಳದ ಹಿಟ್ಟು, 3-4 ಚಮಚ ಮೈದಾ ಹಿಟ್ಟು, ಚಿಟಿಕೆ ಉಪ್ಪು ಮತ್ತು 1/2 ಕಪ್ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತರಕಾರಿ ಮಿಶ್ರಣವನ್ನು ಸಿಲೆಂಡರ್ ಆಕಾರದಲ್ಲಿ ಉಂಡೆಗಳನ್ನಾಗಿ ಮಾಡಿಕೊಂಡು ಅವುಗಳನ್ನು ಹಿಟ್ಟಿನಲ್ಲಿ ಅದ್ದಿ ಮತ್ತು ಬ್ರೆಡ್ ತರಿಯಲ್ಲಿ ಹೊರಳಿಸಿ. ಇನ್ನೊಂದು ಬಾರಿ ಇದನ್ನೇ ಪುನರಾವರ್ತಿಸಿ ಈ ಉಂಡೆಗಳನ್ನು ಕಾದ ಎಣ್ಣೆಯಲ್ಲಿ ಕರಿದರೆ ವೆಜ್ ಚಾಪ್ ರೆಡಿಯಾಗುತ್ತದೆ. ಇದನ್ನು ಟೊಮೆಟೋ ಸಾಸ್ ಜೊತೆಗೆ ತಿಂದರೆ ರುಚಿಯಾಗಿರುತ್ತದೆ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್